Advertisement

ಸಿನಿಮಾಗಳ ಬಗ್ಗೆ ವಿನಾ ಹೇಳಿಕೆ ಬೇಡ: ಬಿಜೆಪಿಗರಿಗೆ ಪ್ರಧಾನಿ ಮೋದಿ ಖಡಕ್‌ ಸೂಚನೆ

10:25 PM Jan 18, 2023 | Team Udayavani |

ನವದೆಹಲಿ: “ಸಿನಿಮಾಗಳ ಬಗ್ಗೆ ವಿನಾಕಾರಣ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಬೇಡಿ’- ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ನಾಯಕರಿಗೆ ಸ್ಪಷ್ಟ ಮಾತುಗಳಲ್ಲಿ ಆದೇಶ ನೀಡಿದ್ದಾರೆ.

Advertisement

ಮಂಗಳವಾರ ಮುಕ್ತಾಯವಾದ ಬಿಜೆಪಿ ಕಾರ್ಯಕಾರಿಣಿಯ ಸಮಾರೋಪ ಭಾಷಣದಲ್ಲಿ ಪ್ರಧಾನಿ ಈ ಮಾತುಗಳನ್ನು ಹೇಳಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. “ಸಿನಿಮಾಗಳ ವಿರುದ್ಧ ವಿನಾಕಾರಣ ಹೇಳಿಕೆ ನೀಡುವುದರಿಂದ ನಾವು ಮಾಡಿರುವ ಹಲವು ಒಳ್ಳೆಯ ಕೆಲಸಗಳು ಮತ್ತು ಸಾಧನೆಗಳು ಕಡೆಗಣಿಸಲ್ಪಡುತ್ತವೆ. ಜತೆಗೆ ವಿವಾದಿತ ಹೇಳಿಕೆಗಳಿಂದ ಅವುಗಳು ಸುದ್ದಿಯಲ್ಲಿ ಇರುತ್ತವೆ. ಮಾತ್ರವಲ್ಲದೆ ಅದನ್ನು ಭಿನ್ನ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತದೆ. ಹೀಗಾಗಿ, ಅದರಿಂದ ದೂರ ಇರಬೇಕು’ ಎಂದು ಹೇಳಿದ್ದಾರೆ.
ಪ್ರಧಾನಿಯವರು ತಮ್ಮ ಭಾಷಣದಲ್ಲಿ ಯಾವುದೇ ಸಿನಿಮಾ ಹೆಸರು ಉಲ್ಲೇಖೀಸದಿದ್ದರೂ, ಪಠಾಣ್‌ ಸಿನಿಮಾ ವಿರುದ್ಧ ಕಟುವಾಗಿ ಟೀಕಿಸಿದ್ದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ಅವರ ಮಾತುಗಳಿಗೆ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಿಶ್ರಾ “ಪ್ರಧಾನಿ ಮೋದಿಯವರ ಮಾತುಗಳು ನಮಗೆಲ್ಲರಿಗೂ ಅನುಸರಣೀಯ’ ಎಂದಿದ್ದಾರೆ. ಕಾರ್ಯಕಾರಿಣಿಯಲ್ಲಿ ಸಚಿವರ ಹೆಸರನ್ನು ಉಲ್ಲೇಖೀಸಿದ್ದಾರೆಯೇ ಎಂಬ ಪ್ರಶ್ನೆಗೆ ಅವರು, “ಯಾರ ಹೆಸರನ್ನೂ ಪ್ರಸ್ತಾಪಿಸಿಲ್ಲ’ ಎಂದಿದ್ದಾರೆ.

ಇಂದು “ದ ಕಾಶ್ಮೀರ್‌ ಫೈಲ್ಸ್‌’ ಮರುಬಿಡುಗಡೆ
2022 ಮಾರ್ಚ್‌ನಲ್ಲಿ ಜಗತ್ತಿನಾದ್ಯಂತ ತೆರೆ ಕಂಡು ಜನಪ್ರಿಯತೆ ಹಾಗೂ ಗಳಿಕೆ ಕಂಡಿದ್ದ “ದ ಕಾಶ್ಮೀರ್‌ ಫೈಲ್ಸ್‌’ ಸಿನಿಮಾ ಜ.19ರಂದು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಬುಧವಾರ ಟ್ವೀಟ್‌ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸಿನಿಮಾವೊಂದು ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನೊಂದೆಡೆ, ಶಾರುಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ಅಭಿನಯದ “ಪಠಾಣ್‌’ ಸಿನಿಮಾ ಜ.25ರಂದು ಜಗತ್ತಿನಾದ್ಯಂತ ತೆರೆ ಕಾಣಲಿದೆ. ಅದಕ್ಕೆ ಪೂರಕವಾಗಿ ಜ.20ರಿಂದಲೇ ಸಿನಿಮಾ ಟಿಕೆಟ್‌ ಬುಕಿಂಗ್‌ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ನಡುವೆ ಗುಜರಾತ್‌ನಲ್ಲಿ ಪಠಾಣ್‌ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುವ ವೇಳೆ ಭದ್ರತೆ ನೀಡಬೇಕು ಎಂದು ಚಿತ್ರಮಂದಿರಗಳ ಹಾಗೂ ಮಲ್ಟಿಪ್ಲೆಕ್ಸ್‌ಗಳ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next