ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ ಅಮಿತ್ ಶಾ ಅವರ “ಲಂಚ್ ಪೇ ಚರ್ಚಾ” ಬಿಜೆಪಿಯ ಅತೃಪ್ತ ಬಣದ ನಿರೀಕ್ಷೆ ಹುಸಿಗೊಳಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸ್ಥಾನ ಸದ್ಯಕ್ಕೆ ಗಟ್ಟಿ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಮೂರರಿಂದ ನಾಲ್ಕು ಉಪಮುಖ್ಯಮಂತ್ರಿಯನ್ನು ಒಳಗೊಂಡಂತೆ ಸಂಪುಟ ಪುನಾರ್ರಚನೆ ನಿಶ್ಚಿತ ಎಂದು ಬಿಜೆಪಿ ಮೂಲಗಳು ಹೇಳಿವೆ.
ಸಿಎಂ ಬಸವರಾಜ್ ಬೊಮ್ಮಾಯಿ ಅವರ ನಿವಾಸದಲ್ಲಿ ಸಚಿವರು, ಶಾಸಕರು, ಸಂಸದರಿಗೆ ಆಯೋಜಿಸಿದ ಭೋಜನ ಕೂಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ.ಆದರೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜತೆ ಪ್ರತ್ಯೇಕವಾಗಿ ಊಟದ ಜತೆ ಮಾತುಕತೆ ನಡೆಸಿದ್ದಾರೆ. ಆದರೆ ಈ ರೌಂಡ್ ಟೇಬಲ್ ಮೀಟಿಂಗ್ ಗುಟ್ಟೇನು? ಎಂಬುದು ಮಾತ್ರ ರಹಸ್ಯವಾಗಿದೆ. ಆದರೆ ಉಳಿದ ಸಚಿವರು, ಶಾಸಕರು, ಮುಖಂಡರ ಜತೆಗೆ ಯಾವುದೇ ಮಾತುಕತೆ ನಡೆದಿಲ್ಲ.
ಆದರೆ ಅಮಿತ್ ಶಾ ಆಗಮನದಿಂದ ಇಲ್ಲಿಯವರೆಗೆ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮನೆಗೂ ಅವರು ಭೇಟಿ ನೀಡಿ ಕುಟುಂಬ ಸದಸ್ಯರ ಜತೆಗೂ ಕೆಲ ಸಮಯ ಕಳೆದಿರುವುದರಿಂದ ಇದೆಲ್ಲವೂ ಊಹಾಪೋಹ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಶಾ ಔತಣ ಕೂಟದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯಾಗಲಿಲ್ಲ: ಶೆಟ್ಟರ್
Related Articles
ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾಪವೇ ಇಲ್ಲ. ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ ಎಂದು ಹೇಳಿದರೆ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಬಿಎಸ್ ವೈ ಅಭಯ : ಭೋಜನ ಕೂಟಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಇನ್ನು ಎರಡು ಮೂರು ದಿನದಲ್ಲಿ ಸಂಪುಟ ವಿಸ್ತರಣೆಯಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಸುದ್ದಿ ಮತ್ತೆ ಗಾಳಿ ಸುದ್ದಿಯಾಗಿದೆ.