Advertisement

ಹಳ್ಳಿಗಳಲ್ಲಿ ನೈರ್ಮಲ್ಯ ಮಾಯ

12:36 PM Dec 10, 2019 | Team Udayavani |

ಮುದಗಲ್ಲ: ಸಮೀಪದ ತಲೇಖಾನ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಗ್ರಾಪಂ ವ್ಯಾಪ್ತಿಯ ಹಳ್ಳಿ, ತಾಂಡಾ, ದೊಡ್ಡಿಗಳಲ್ಲಿ ನೈರ್ಮಲ್ಯ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ಜಾನುವಾರು ಕುಡಿಯುವ ನೀರಿನ ತೊಟ್ಟಿ, ನೀರು ಸಂಗ್ರಹ ಗುಮ್ಮಿಗಳ ಸ್ವಚ್ಛತೆ, ಪ್ಲಾಟ್‌ ಫಾರಂ ಸ್ವಚ್ಛತೆ ಹಾಗೂ ವಿವಿಧ ಗ್ರಾಮ ಮತ್ತು ತಾಂಡಾಗಳಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ಸಂಗ್ರಹವಾಗಿ ದುರ್ವಾಸನೆ ಹರಡಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಿದೆ. ದಾದುಡಿ ತಾಂಡಾದಲ್ಲಿ ಜಾನುವಾರು ಕುಡಿಯುವ ನೀರಿನ ತೊಟ್ಟಿ ಸ್ವತ್ಛಗೊಳಿಸಿ ವರ್ಷವೇ ಗತಿಸಿದೆ. ಆದರೂ ಗ್ರಾಮ ಪಂಚಾಯಿತಿ ಆಡಳಿತ ಇತ್ತ ಹೊರಳಿ ನೋಡಿಲ್ಲ. ನೀರಿನಲ್ಲಿ ಹುಳುಗಳು ಉತ್ಪತ್ತಿಯಾಗಿವೆ. ಧೂಳು, ಕಸಕಡ್ಡಿ ಸಂಗ್ರಹವಾಗಿ ನೀರು ಕಲುಷಿತಗೊಂಡು ವಾಸನೆ ಬೀರುತ್ತಿದೆ. ಜಾನುವಾರುಗಳು ನೀರು ಕುಡಿಯಲು ಹಿಂದೇಟು ಹಾಕುತ್ತಿವೆ. ಜಾನುವಾರು ತೊಟ್ಟಿಯಿಂದ ನೀರು ಸೋರಿ ಸುತ್ತಲು ಕೆಸರು ನಿಂತಿದೆ. ಜಾಲಿಗಿಡಗಳ ಬೆಳೆದು ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಡುತ್ತಿವೆ. ಇದರಿಂದ ಅಕ್ಕಪಕ್ಕದ ಮನೆಗಳಿಗೆ ಹಾವು, ಚೇಳು ಇತರೆ ವಿಷಜಂತುಗಳು ನುಗ್ಗುತ್ತಿವೆ ಎಂದು ದಾದುಡಿ ತಾಂಡಾದ ರಾಮಚಂದ್ರಪ್ಪ, ನಾರಾಯಣಪ್ಪ, ಕನಕಪ್ಪ, ವಾಸುರಾಮ ಸೇರಿದಂತೆ ಅನೇಕರು ಆರೋಪಿಸಿದ್ದಾರೆ.

ಜಾನುವಾರು ತೊಟ್ಟಿ ಸ್ವತ್ಛಗೊಳಿಸಿ ಸುತ್ತಲು ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಬೇಕೆಂದು ತಾಂಡಾ ನಿವಾಸಿಗಳು ಆಗ್ರಹಿಸಿದ್ದಾರೆ. ಲಿಂಬೆಪ್ಪನ ತಾಂಡಾದಲ್ಲಿ ಜಾನುವಾರು ತೊಟ್ಟಿಯ ಸುತ್ತ ತ್ಯಾಜ್ಯ ಸಂಗ್ರಹವಾಗಿದೆ. ವೇಣ್ಯಪ್ಪನ ತಾಂಡಾದಲ್ಲಿ ಚರಂಡಿ ಇಲ್ಲದೇ ನೀರು ರಸ್ತೆಯಲ್ಲೇ ಹರಿಯುತ್ತಿದೆ. ದೇಸಾಯಿ ಭೋಗಾಪುರ ಗ್ರಾಮದ ಸ.ಕಿ.ಪ್ರಾ. ಶಾಲೆ ಮುಂದಿನ ರಸ್ತೆಯಲ್ಲಿ ನೀರು ಹರಿದು ಪಾಚಿಗಟ್ಟಿದೆ. ಶಾಲೆಯ ಮಕ್ಕಳು ಅದೇ ನೀರಿನಲ್ಲಿ ಓಡಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಸರಕಾರ ನೈರ್ಮಲ್ಯ ಕಾಪಾಡಲು 14ನೇ ಹಣಕಾಸು ಅನುದಾನ ಮತ್ತು ತೆರಿಗೆ ಸಂಗ್ರಹದಲ್ಲಿ ಅನುದಾನ ಮೀಸಲಿರಿಸಿದೆ. ಆದರೆ ಗ್ರಾಪಂ ಆಡಳಿತ ಮಾತ್ರ ಸ್ವತ್ಛತೆಗೆ ಮುಂದಾಗುತ್ತಿಲ್ಲ. ಗ್ರಾಪಂ ಅಧಿಕಾರಿಗಳು ಇತ್ತ ಗಮನಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮೇಲಾಧಿಕಾರಿಗಳು ಗ್ರಾಮ ಪಂಚಾಯಿತಿಗೆ ಈ ಕುರಿತು ಸೂಚಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next