Advertisement

ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಚ್ಛತೆ ಮರೀಚಿಕೆ

02:47 PM Jul 30, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸ್ಥಳೀಯ ಎಪಿಎಂಸಿ ಆಡಳಿತ ಮಂಡಳಿ ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ಮರೆತಿರುವುದರಿಂದ ಇಡೀ ಮಾರುಕಟ್ಟೆ ಪ್ರಾಂಗಣ ಅನೈರ್ಮಲ್ಯಕ್ಕೆ ತುತ್ತಾಗಿ ಮಾರುಕಟ್ಟೆ ವ್ಯಾಪಾರಸ್ಥರ ಹಾಗೂ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಸಾಂಕ್ರಾಮಿಕ ರೋಗ ಭೀತಿ: ಸಮರ್ಪಕ ಮೂಲ ಸೌಕರ್ಯಗಳ ಕೊರತೆಯಿಂದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತಾಪಿ ಜನಕ್ಕೆ ಮೂಲ ಸೌಕರ್ಯಗಳು ಇಲ್ಲ. ಕನಿಷ್ಠ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇಲ್ಲದೇ ಪರದಾಡಬೇಕಿದ್ದು, ಸದ್ಯ ಮಾರುಕಟ್ಟೆ ಅಸ್ವಚ್ಛತೆಯಿಂದ ಸಾಂಕ್ರಾಮಿಕ ರೋಗಗಳ ಹರಡುವ ತಾಣವಾಗಿ ಪರಿಣಮಿಸಿದೆ.

ಹಲವು ದಿನಗಳಿಂದ ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಳೆ ನೀರು ನಿಂತು ವ್ಯಾಪಾರಸ್ಥರು, ಸಾರ್ವಜನಿಕರು ಒಂದು ಕಡೆಯಿಂದ ಮತ್ತೂಂದೆಡೆ ಸಂಚರಿಸಲು ಪರದಾಡುವಂತಾಗಿದೆ. ಚರಂಡಿಗಳಲ್ಲಿ ಮಳೆ ನೀರು ನಿಂತು ಅವ್ಯವಸ್ಥೆಯನ್ನು ಉಂಟು ಮಾಡಿದ್ದರೂ ಹೇಳ್ಳೋರು ಕೇಳ್ಳೋರು ಇಲ್ಲವಾಗಿದೆ. ಕೊಳಚೆ ನೀರಲ್ಲಿಯೇ ಜನ ತಿರುಗಾಡುವಂತಾಗಿದೆ. ಕಾಲಕಾಲಕ್ಕೆ ತ್ಯಾಜ್ಯ ವಿಲೇವಾರಿ ಮಾಡದ ಪರಿಣಾಮ ಎಪಿಎಂಸಿ ಆವರಣದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ಕೊಳೆತು ನಾರುತ್ತಿದ್ದು, ವಿಲೇವಾರಿ ಮಾತ್ರ ಅಪರೂಪವಾಗಿದೆ.

ಸೊಳ್ಳೆಗಳ ಕಾಟ: ಇಡೀ ಮಾರುಕಟ್ಟೆ ಆವರಣ ಒಂದು ರೀತಿ ಕೊಳಚೆ ಪ್ರದೇಶದಂತೆ ಭಾಸವಾಗುತ್ತಿದ್ದು, ಕೊಳಚೆ ನೀರಿನಲ್ಲಿ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳ ಕಾಟಕ್ಕೆ ಮಾರುಕಟ್ಟೆಗೆ ಬರುವ ರೈತರು, ಗ್ರಾಹಕರು ಬೆಚ್ಚಿ ಬೀಳುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಪ್ರತಿ ದಿನ ಹೂವಿನ ಹರಾಜು ನಡೆದರೆ ಪ್ರತಿ ಶನಿವಾರ ಹಾಗೂ ಬುಧವಾರ ತರಕಾರಿ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಜೊತೆಗೆ ವಾರದ ಪೂರ್ತಿ ಒಂದಲ್ಲ ಒಂದು ತರಕಾರಿ ಮಾರುಕಟ್ಟೆ ನಡೆದು ನಿತ್ಯ ಸಾವಿರಾರು ರೈತರು ಮಾರುಕಟ್ಟೆಗೆ ಬಂದು ಹೋಗುತ್ತಾರೆ.

Advertisement

ಅನೈರ್ಮಲ್ಯದಿಂದಾಗಿ ರೈತರು ಮಾರುಕಟ್ಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮಾರುಕಟ್ಟೆಗೆ ಬಂದರೆ ಡೆಂಘೀ, ಚಿಕೂನ್‌ಗುನ್ಯಾ ಕಾಯಿಲೆಳಿಗೆ ತುತ್ತಾಗುವ ಭೀತಿ ರೈತರಲ್ಲಿ ಆವರಿಸಿದೆ.

ಮೊದಲೇ ಜಿಲ್ಲೆಯಲ್ಲಿ ಮಳೆಗಾಲ ಶುರುವಾದಂತೆ ಸೊಳ್ಳೆಗಳ ಕಾಟ ಹೆಚ್ಚಾಗಿ ರೈತರು, ಮಹಿಳೆಯರು, ಮಕ್ಕಳು ವ್ಯಾಪಕವಾಗಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತಿದ್ದಾರೆ. ಡೆಂಘೀ, ಚಿಕೂನ್‌ಗುನ್ಯಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿಯೇ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆ ರೋಗಗಳ ಹರಡುವ ತಾಣವಾಗಿ ಮಾರ್ಪಟ್ಟಿದೆ.

 

● ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next