Advertisement

ಧರ್ಮ-ಜಾತಿ ಕಾರಣಕ್ಕೆ ಗದಾಪ್ರಹಾರ ಸಲ್ಲ: ಕುರುಬೂರು

10:39 AM Apr 15, 2022 | Team Udayavani |

ಧಾರವಾಡ: ರೈತರ ಉತ್ಪನ್ನಗಳನ್ನು ಮಾರಾಟ ಮಾಡುವ ಯಾವುದೇ ವರ್ಗದ ಜನರ ಮೇಲೆ ಧರ್ಮ-ಜಾತಿಯ ಕಾರಣಕ್ಕಾಗಿ ಗದಾಪ್ರಹಾರ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದರು.

Advertisement

ನಗರದ ಸರ್ಕ್ಯೂಟ್‌ ಹೌಸ್‌ ಆವರಣದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದು ರೈತ ಸಮುದಾಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಸರಕಾರ ಗಂಭೀರ ಚಿಂತನೆ ಮಾಡುವುದರ ಜತೆಗೆ ಪರಿಹಾರ ಒದಗಿಸಬೇಕು ಎಂದರು.

ಎಂಎಸ್‌ಪಿ ರೈತನ ಹಕ್ಕು. ಇದಕ್ಕೆ ಶಾಸನಬದ್ಧ ಖಾತ್ರಿ ನೀಡುವ ವ್ಯವಸ್ಥೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ನುಡಿದಂತೆ ನಡೆಯಲಿ. ದಕ್ಷಿಣ ಭಾರತ ರಾಜ್ಯಗಳ ರೈತರ ಪ್ರತಿನಿಧಿಗಳನ್ನು ಒಳಗೊಂಡಂತೆ ಸಮಿತಿ ರಚಿಸಿ ನಿರ್ದಿಷ್ಟ ಅವಧಿಯೊಳಗೆ ವರದಿ ತರಿಸಿಕೊಂಡು ಜಾರಿ ಮಾಡಲು ಮುಂದಾಗಬೇಕು. ಏ.29 ರಂದು ಬೆಂಗಳೂರಿನಲ್ಲಿ ಈ ಬಗ್ಗೆ ಕೃಷಿ ಪರಿಣಿತರ ಜೊತೆ ರಾಜ್ಯಮಟ್ಟದ ಸಂವಾದ ಕಾರ್ಯಕ್ರಮ ನಡೆಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.

ಕಬ್ಬು ಕಟಾವು ಸಾಗಾಣಿಕೆ ದರ ದುಪ್ಪಟ್ಟು, ಕಬ್ಬು ಸರಬರಾಜು ಮಾಡಿದ ರೈತರಿಗೆ 3000 ಕೋಟಿ ಬಾಕಿ ಹಣ ಬಿಕ್ಕಟ್ಟು ತಂದಿದೆ. ಇನ್ನಾದರೂ ಸರ್ಕಾರ ಕಬ್ಬಿನ ಎಫ್‌ಆರ್‌ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಲಿ. ರೈತರ ಕೃಷಿ ಸಾಲ ನೀತಿ ಬದಲಾಗಲಿ. ಜಮೀನು ಮೌಲ್ಯಕ್ಕೆ ಅನುಗುಣವಾಗಿ ಶೇ.75 ಸಾಲ ನೀಡುವ ಯೋಜನೆ ಜಾರಿಗೆ ಬರಲಿ. ರಾಜ್ಯದ ಎಲ್ಲಾ 34,000 ಕೆರೆಗಳಿಗೂ ಏತ ನೀರಾವರಿ ಯೋಜನೆ ಮೂಲಕ ನೀರು ತುಂಬಿಸಲು ಸಮೀಪದ ನದಿಗಳಿಗೆ ಬ್ಯಾರೇಜ್‌ಗಳನ್ನು ನಿರ್ಮಿಸಿ, ಈ ಮೂಲಕ ನೀರು ಹರಿಸಿ ತುಂಬಿಸುವ ಕೆಲಸ ಕೈಗೆತ್ತಿಕೊಳ್ಳಲಿ ಎಂದರು.

ರಾಜ್ಯ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ಸುರೇಶ ಪಾಟೀಲ, ಎಂ.ಜಿ. ಸಿಂದಗಿ, ಹತ್ತಳ್ಳಿ ದೇವರಾಜ, ಗುರುಸಿದ್ದಪ್ಪ ಕೋಟಗೆ, ನಾಗೇಶ ಸೋರಗಾವಿ ಇದ್ದರು.

Advertisement

ಡಾ| ಅಂಬೇಡ್ಕರ್‌ ಆಶಯಗಳಿಗೆ ಭಂಗ ತರುವ ಕಾರ್ಯಗಳು ನಡೆಯುತ್ತಿದ್ದು, ಮೀಸಲಾತಿ ಬಲಾಡ್ಯರ ಪಾಲಾ ಗುತ್ತಿದೆ. ಒಮ್ಮೆ ಮೀಸಲಾತಿ ಪಡೆದವರು ಏಳು ವರ್ಷ ಕಾಲ ಅದೇ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎನ್ನುವ ನಿಯಮ ಜಾರಿಗೆ ತರುವ ಬಗ್ಗೆ ಕೇಂದ್ರ- ರಾಜ್ಯ ಸರ್ಕಾರಗಳು ವಿಮರ್ಶೆ ನಡೆಸಲು ಮುಂದಾಗಲಿ. -ಕುರುಬೂರು ಶಾಂತಕುಮಾರ್‌, ರಾಜ್ಯಾಧ್ಯಕ್ಷ, ಕಬ್ಬು ಬೆಳೆಗಾರರ ಸಂಘ

ಬಾಕಿ ಪಾವತಿ ವಿಳಂಬವಾದರೆ ಬೀದಿಗಿಳಿದು ಹೋರಾಟ:

ಧಾರವಾಡ: ರಾಜ್ಯದಲ್ಲಿ ಈವರೆಗೆ 5.80 ಕೋಟಿ ಮೆಟ್ರಿಕ್‌ ಟನ್‌ ಕಬ್ಬು ನುರಿಸಲಾಗಿದ್ದು, ಸುಮಾರು 3.5 ರಿಂದ 4 ಸಾವಿರ ಕೋಟಿ ಹಣ ಕಬ್ಬು ಬೆಳೆಗಾರರಿಗೆ ಪಾವತಿಯಾಗುವುದು ಬಾಕಿಯಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಪಾವತಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕಾರ್ಖಾನೆಗಳಿಂದ ಸಕ್ಕರೆ ಸಚಿವರು ತಕ್ಷಣವೇ ಹಣ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರಸಗೊಬ್ಬರ ಸೇರಿದಂತೆ ಎಲ್ಲ ಕೃಷಿ ಉಪಕರಣಗಳ ಬೆಲೆ ಏರಿಕೆಯಾಗಿದೆ. ಆದರೆ, ರೈತರು ಬೆಳೆಯುವ ಬೆಳೆಗೆ ಮಾತ್ರ ಇಂದಿಗೂ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರ ಉತ್ಪನ್ನಗಳನ್ನು ಮಾರಾಟ ಮಾಡುವುದರಲ್ಲಿ ಜಾತಿ-ಧರ್ಮಗಳ ವಿಷ ಬೀಜ ಬಿತ್ತಿ ರೈತರ ಮೇಲೆ ಕೆಟ್ಟ ಪರಿಣಾಮ ಆಗುವಂತೆ ಸರಕಾರಗಳು ಮಾಡುತ್ತಿವೆ. ಇದು ಸರಿಯಾದ ಬೆಳವಣಿಗೆಯಲ್ಲ. ಇದು ಕೃಷಿ ಕ್ಷೇತ್ರಕ್ಕೆ ಪೆಟ್ಟು ನೀಡುವ ತಂತ್ರ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next