ಬೆಂಗಳೂರು: ಪಕ್ಷ ಮತ್ತು ಸರ್ಕಾರದಲ್ಲಿ ಏನೂ ಬದಲಾವಣೆ ಇಲ್ಲ. ಇವತ್ತಿನ ಸಭೆಯಲ್ಲಿ ಮುಂದಿನ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡುತ್ತೇವೆ. ಸಂಪುಟ ಪುನಾರಚನೆ ಸಿಎಂ ಅವರ ವಿವೇಚನೆಗೆ ಬಿಟ್ಟಿದ್ದು. ಸಿಎಂ ವಿವೇಚನೆ ಮಾಡಿ ರಾಷ್ಟ್ರೀಯ ನಾಯಕರ ಜತೆ ಚರ್ಚೆ ನಡೆಸುತ್ತಾರೆ. ನಾವೆಲ್ಲ ಒಟ್ಟಾಗಿ ಕೂತು ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕುಮಾರಕೃಪಾ ಅತಿಥಿಗೃಹದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 13 ರಿಂದ ಮೂರು ಹಂತದಲ್ಲಿ ನಾವು ಪ್ರವಾಸ ಮಾಡುತ್ತೇವೆ. ವಿಭಾಗಗಳ ಮಟ್ಟದಲ್ಲಿ ಸಭೆ ನಡೆಸುತ್ತೇವೆ. ಸಂಘಟನೆಯ ಚರ್ಚೆ, ಮನೆಮನೆಗೆ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಗಂಡಸ್ತನದ ಪ್ರಶ್ನೆ ಅನಗತ್ಯ: ಎಚ್ ಡಿಕೆ ಗಂಡಸ್ತನದ ಹೇಳಿಕೆಗೆ ತಿರುಗೇಟು ನೀಡಿದ ನಳಿನ್ ಕಟೀಲ್, ಅವರೂ ಸಿಎಂ ಆಗಿದ್ದವರು. ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದು, ಅದರ ಬಗ್ಗೆ ನಾನು ಹೆಚ್ಚು ಹೇಳುವುದಿಲ್ಲ. ಕುಮಾರಸ್ವಾಮಿ ಗಂಡಸ್ತನದ ಪ್ರಶ್ನೆ ಎತ್ತಿದ್ದಾರೆ. ಸರ್ಕಾರ ನಡೆಸಲು ಬುದ್ಧಿವಂತಿಕೆ, ಯೋಚನೆ, ಯೋಜನೆ ಅಗತ್ಯ. ಸಿಎಂ ಅವರ ಗಂಡಸ್ತನ ಬಗ್ಗೆ ಎಚ್ಡಿಕೆ ಪ್ರಶ್ನೆ ಮಾಡುವ ಅಗತ್ಯವಿಲ್ಲ. ಅವರು ತಾಜ್ ಹೊಟೇಲಿನಲ್ಲಿ ಇದ್ದು ಸರ್ಕಾರ ಬಿದ್ದು ಹೋಯಿತು ಎಂದರು.
ಇದನ್ನೂ ಓದಿ:ವಿಹೆಚ್ ಪಿ, ಬಜರಂಗದಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ: ಹೆಚ್ ಡಿಕೆ ಕಿಡಿ ಕಾರಿ ಟ್ವೀಟ್
ಹಲಾಲ್ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಕಟೀಲ್, ಸರ್ಕಾರಕ್ಕೆ ಯಾವ ಕ್ರಮ ತಗೆದುಕೊಳ್ಳಬೇಕು, ಏನು ಹೊಣೆಯೆಂದು ಗೊತ್ತಿದೆ. ಹಿಜಾಬ್ ಬಂದಾಗ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಯಿತು. ಅದೇ ರೀತಿಯ ಕಾನೂನಾತ್ಮಕ ಪರಿಹಾರ ಇದಕ್ಕೂ ಕೊಡಲಾಗುತ್ತದೆ ಎಂದರು.