ಶಿವಮೊಗ್ಗ: ರಾಜ್ಯದಲ್ಲಾಗಿರುವ ಅತಿವೃಷ್ಟಿಯಿಂದ 50 ಸಾವಿರ ಕೋಟಿ ನಷ್ಟ ಸಂಭವಿಸಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದ್ದಾರೆ. ಆದರೆ, ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡಲು ಒತ್ತಡ ಹೇರುತ್ತಿಲ್ಲವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರವಾಹದಿಂದ ಆಸ್ತಿಪಾಸ್ತಿ ನಷ್ಟವಾಗಿದೆ. ಗ್ರಾಮಗಳೇ ಮುಳುಗಿವೆ. ಹಲವು ಮಂದಿ ಮೃತಪಟ್ಟು ದುರಂತ ಸಂಭವಿಸಿದೆ.
ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಎಂದು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಕೇಂದ್ರದ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದರೂ ಯಾವುದೇ ಪರಿಹಾರ ಘೋಷಿಸಲಿಲ್ಲ. ಸೌಜನ್ಯಕ್ಕೂ ರಾಜ್ಯದ ಜನರಿಗೆ ಸಾಂತ್ವನ ಹೇಳಲಿಲ್ಲ ಎಂದು ಕಿಡಿಕಾರಿದರು.
ಸಣ್ಣ ಸಣ್ಣ ವಿಷಯಕ್ಕೂ ಟ್ವೀಟ್ ಮಾಡುವ ಪ್ರಧಾನಿ ಮೋದಿ ಇಂಥ ದೊಡ್ಡ ವಿಪತ್ತಿನ ವೇಳೆ ತುಟಿ ಬಿಚ್ಚುತ್ತಿಲ್ಲ. ಕರ್ನಾಟಕದಲ್ಲಷ್ಟೇ ಅಲ್ಲ, ಮಹಾರಾಷ್ಟ್ರ, ಕೇರಳ, ಆಂಧ್ರಪದೇಶ, ಬಿಹಾರದಲ್ಲೂ ಜಲಪ್ರಳಯ ಆಗಿದೆ. ಇದರ ಬಗ್ಗೆ ಮಾತಿಲ್ಲ. 2009ರಲ್ಲಿ ಬಿಜೆಪಿ ಸರಕಾರವಿದ್ದಾಗ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸಂಭವಿಸಿತ್ತು.
ಆಗ ಪ್ರಧಾನಿ ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ 3 ಸಾವಿರ ಕೋಟಿ ರೂ. ಪರಿಹಾರ ಘೋಷಿಸಿದ್ದರು ಎಂದರು. ನಾವು ಪ್ರಶ್ನೆ ಕೇಳಿದರೆ ದೇಶದ್ರೋಹಿಗಳು ಎನ್ನುತ್ತಾರೆ. ಪಾರ್ಲಿಮೆಂಟ್‌ನಲ್ಲಿ ಯಾವುದೇ ನಿರ್ಧಾರ ನಿರ್ಣಯ ತೆಗೆದುಕೊಳ್ಳಲು ಹಿಂದೆ ಮುಂದೆ ಮಾಡುವುದಿಲ್ಲ. ಆದರೆ, ಪ್ರವಾಹದ ಸಾಂತ್ವನದ ಮಾತಿಲ್ಲ ಎಂದು ಟೀಕಿಸಿದರು.
ಸಿಎಂ ರಾಜೀನಾಮೆ ನೀಡಲಿ: ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲ. ಹೀಗಿರುವಾಗ ನೆರೆ ನಿರ್ವಹಣೆ ಹೇಗೆ ಸಾಧ್ಯ. ಜನರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯಡಿಯೂರಪ್ಪ ಅ ಧಿಕಾರಕ್ಕೆ ಬರಲು ಎಷ್ಟು ಕಷ್ಟ ಪಟ್ಟರು. ಶಾಸಕರನ್ನು ಖರೀದಿಸಲು ಅವರ ಬಳಿ ಹಣವಿದೆ, ಸಂತ್ರಸ್ತರಿಗೆ ನೀಡಲು ಹಣವಿಲ್ಲ ಎಂದು ದಿನೇಶ್ ಗಂಡೂರಾವ್ ಹರಿಹಾಯ್ದರು.