Advertisement

ವೀರಶೈವ ಲಿಂಗಾಯತರಿಗಿಲ್ಲ ಸ್ಮಶಾನ

03:13 PM Jan 14, 2020 | Suhan S |

ಲಕ್ಷ್ಮೇಶ್ವರ: ಕಳೆದ ಎರಡು ದಶಕಗಳಿಂದಲೂ ಪಟ್ಟಣದಲ್ಲಿರುವ ಬಹುಸಂಖ್ಯಾತ ವೀರಶೈವ ಲಿಂಗಾಯತರು ಸ್ಮಶಾನಭೂಮಿಗಾಗಿ ಸೆಣಸಾಡುತ್ತಿದ್ದರೂ ಇದುವರೆಗೂ ಈಡೇರಿಲ್ಲ. ಪಟ್ಟಣದಲ್ಲಿ ಸುಮಾರು 50 ಸಾವಿರ ಜನಸಂಖ್ಯೆಯಿದ್ದು, ಅದರಲ್ಲಿ ಬಹುಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತರ ಒಳಪಂಗಡದವರು ನೂರಾರು ವರ್ಷಗಳಿಂದಲೂ ಶಿಗ್ಲಿ ರಸ್ತೆಯಲ್ಲಿರುವ ಜಮೀನಿನಲ್ಲಿ ಶವಸಂಸ್ಕಾರ ಮಾಡುತ್ತಾ ಬಂದಿದ್ದಾರೆ.

Advertisement

ಈ ಹಿಂದೆ ಪಟ್ಟಣದ ಹಿರಿಯರು ಈ ಪ್ರದೇಶದ 54 ಎಕರೆ ಜಮೀನನ್ನು ಕಲ್ಮಠ ಕುಟುಂಬದವರಿಗೆ ಉಳುಮೆಮಾಡಲು ನೀಡಿ ಇಲ್ಲಿನ ಕರಬಸಪ್ಪಜ್ಜನ ಮಠದ ನಿರ್ವಹಣೆ ಮಾಡಲು ಹೇಳಿದ್ದರಂತೆ. ಅಲ್ಲದೇ ಅದರಲ್ಲಿನ 10 ಎಕರೆ ಜಮೀನನ್ನು ರುದ್ರಭೂಮಿಗೆ ಮೀಸಲಿರಿಸುವಂತೆ ವೀರಶೈವ ಲಿಂಗಾಯತ ಸಮಾಜದವರು ಮೌಖೀಕವಾಗಿ ತಿಳಿಸಿದ್ದರು. ಮುಂದೆ ಊಳುವವನೇ ಭೂಮಿ ಒಡೆಯ ಕಾನೂನು ಜಾರಿಯಾದ ಸಂದರ್ಭದಲ್ಲಿ ಕಂದಾಯ ಇಲಾಖೆಯವರ ದಿಕ್ಕು ತಪ್ಪಿಸಿ ಎಲ್ಲ ಪ್ರದೇಶವನ್ನು ಕಲ್ಮಠ ಮನೆತನದವರು ರೈತ ಎಂಟ್ರಿ ಮಾಡಿಸಿಕೊಂಡಿದ್ದರು.

ಶವ ಸಂಸ್ಕಾರಕ್ಕಾಗಿ ಬಳಕೆಯಾಗುತ್ತಿದ್ದ ಈ ಜಮೀನನ್ನು ಆಗಾಗ್ಗೆ ಅಷ್ಟಷ್ಟೇ ಪರಭಾರೆ ಮಾಡಲಾಗಿದೆ. ಆದಾಗ್ಯೂ ಸಹಿತ ಶವ ಸಂಸ್ಕಾರಕ್ಕಾಗಿ ಒಟ್ಟು 7 ಎಕರೆ 31 ಗುಂಟೆ ಜಮೀನನ್ನು ಬಳಸುತ್ತಾ ಬರಲಾಗಿದೆ. ಇದರಲ್ಲಿ ಸರ್ವೇ ನಂ.14/1 ಎರಡು ಎಕರೆ 20 ಗುಂಟೆ, 11/6 21 ಗುಂಟೆ, 11/3 ಒಂದು ಎಕರೆ 20 ಇವು ಮಾಲ್ಕಿಯಲ್ಲಿವೆ. 11/5 ಮೂರು ಎಕರೆ ಆಶ್ರಯ ನಿವೇಶನಕ್ಕಾಗಿ ನೀಡಲಾಗಿದೆ. ಉಳಿದ 11/4ರ 11 ಗುಂಟೆ ಮಾತ್ರ ಸರ್ಕಾರ ಹೆಸರಿನಲ್ಲಿದೆ. ಆದರೆ ಇಲ್ಲಿನ ಜಮೀನುಗಳನ್ನು ಖರೀದಿಸಿರುವ ಕೆಲ ಮಾಲೀಕರು ಸಮಾಜದ ಹಿತಕ್ಕಾಗಿ ಬಿಟ್ಟುಕೊಡಲು ಸಿದ್ಧರಿದ್ದು ಈಗಾಗಲೇ ಸಂಬಂಧಪಟ್ಟ ದಾಖಲೆಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿವೆ ಎಂಬುದು ಕೊಂಚ ಸಮಾಧಾನದ ವಿಷಯ.

ಸರ್ಕಾರ ರುದ್ರಭೂಮಿ ಖರೀದಿಗೆ ಮುಂದಾಗಿದ್ದು ವೀರಶೈವ ಲಿಂಗಾಯತ ಸಮುದಾಯಕ್ಕೆ ರುದ್ರಭೂಮಿಗಾಗಿ ಜಮೀನು ಖರೀದಿ ಪ್ರಕ್ರಿಯೆ ಪ್ರಗತಿ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಈ ಸಮಸ್ಯೆ ಇತ್ಯರ್ಥವಾಗಲಿದೆ.-ಭ್ರಮರಾಂಬ ಗುಬ್ಬಿಶೆಟ್ಟಿ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next