Advertisement
ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಆಗಮಿಸಿದ ಅವರು, ಸುದ್ದಿಗಾರರ ಜೊತೆ ಮಾತನಾಡಿದರು. ವಿಧಾನಸಭೆಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುತ್ತದೆ ಎಂದು ಬಿಜೆಪಿಯವರು ಗೊಂದಲ ಸೃಷ್ಟಿಸುತ್ತಿದ್ದಾರೆ ಅಷ್ಟೆ. ಆದರೆ, ಸರ್ಕಾರದ ಅಧಿಕಾರಾವಧಿ 5 ವರ್ಷ ಪೂರ್ಣವಾಗುವ ಏಪ್ರಿಲ್ ಅಥವಾ ಮೇನಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಚುನಾವಣೆ ನಡೆಯಲಿದೆ. ಅವಧಿ ಪೂರ್ವ ಚುನಾವಣೆಗೆ ಹೋಗಲು ರೈತರ ಸಾಲ ಮನ್ನಾ ಮಾಡಿದ್ದಾರೆ ಎಂಬ ಗುಂಗಿನಲ್ಲಿ ಬಿಜೆಪಿಯ ಯಡಿಯೂರಪ್ಪ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್‌ಗೆ 5 ವರ್ಷ ಸರ್ಕಾರ ನಡೆಸಲು ಆದೇಶ ಕೊಟ್ಟಿದ್ದಾರೆ. ಅದರಂತೆ 5 ವರ್ಷ ಅಧಿಕಾರ ಪೂರೈಸುತ್ತೇವೆ. ಚುನಾವಣೆ ವೇಳೆ ಜನರಿಗೆ ಕೊಟ್ಟ ಭರವಸೆಗಳೆಲ್ಲವನ್ನೂ ಈಡೇರಿಸುತ್ತೇವೆ ಎಂದರು.
ಬಳಿಕ ಗಾಂಧಿ ಭವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಸಿದ್ದು, ಕಳೆದ ಬಜೆಟ್‌ನಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಗಾಂಧಿ ಭವನ ನಿರ್ಮಾಣ ಮಾಡುವ ಘೋಷಣೆ ಮಾಡಿದ್ದೆ. ಅದರಂತೆ ಗಾಂಧಿ ಭವನಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದೇನೆ ಎಂದರು. ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್‌ಶಾ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿ, “ಗಾಂಧೀಜಿ ಚತುರ ಬನಿಯಾ ಅಷ್ಟೇ’ ಎನ್ನುವ ಮೂಲಕ ಅಮಿತ್ ಶಾ ಅವರು ಗಾಂಧೀಜಿ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಆದರೆ, ಗಾಂಧೀಜಿಯವರ ನಾಯಕತ್ವದಲ್ಲಿಯೇ ಭಾರತ ಸ್ವತಂತ್ರ್ಯವಾಗಿದ್ದು ಎಂಬ ಕನಿಷ್ಠ ಜ್ಞಾನವೂ ಅಮಿತ್ ಶಾಗೆ ಇಲ್ಲ ಎಂದು ಕಿಡಿ ಕಾರಿದರು. ರಾಜ್ಯದಲ್ಲಿ ಬಿಜೆಪಿಯವರು ಈಗ “ನಮ್ಮ ನಡಿಗೆ ದಲಿತರ ಮನೆ ಕಡೆಗೆ’ ಎಂದು ಹೊರಟಿದ್ದಾರೆ. ದಲಿತರ ಮನೆಗೆ ಹೋಗಿ ಹೋಟೆಲ್‌ನಿಂದ ತಿಂಡಿ ತರಿಸಿಕೊಂಡು ತಿಂದರೆ ಜಾತಿ ವ್ಯವಸ್ಥೆ ತೊಲಗುವುದಿಲ್ಲ. ದಲಿತರ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೆ ಅಂತರ್ಜಾತಿ ವಿವಾಹ ಮಾಡಿಕೊಂಡು ಜಾತ್ಯತೀತತೆ ಪ್ರದರ್ಶಿಸಲಿ, ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
Related Articles
Advertisement
ಸಾಲ ಮನ್ನಾ ದಿಂದ ರೈತರ ಎಲ್ಲಾ ಸಮಸ್ಯೆಗಳೂ ಬಗೆಹರಿಯುವುದಿಲ್ಲ. ರೈತರ ಸಮಸ್ಯೆಗಳು ಶಾಶ್ವತವಾಗಿ ಬಗೆಹರಿಯಬೇಕಾದರೆ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬೇಕು. ಡಾ.ಸ್ವಾಮಿನಾಥನ್ ಅವರ ಸಲಹೆಯಂತೆ ರೈತರು ಬೆಳೆದ ಬೆಳೆಗೆ ಈಗಿನ ಮಾರುಕಟ್ಟೆ ಬೆಲೆಗಿಂತ ಶೇ.50ರಷ್ಟು ಮೌಲ್ಯ ನಿರ್ಧಾರ ಆಗಬೇಕು. ಈ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಆದರೆ, ಪ್ರಧಾನಿ ಮೋದಿ ಅವರು ಈ ಬಗ್ಗೆ ತುಟಿ ಬಿಚ್ಚುವುದಿಲ್ಲ.ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ.-ಸಿದ್ದರಾಮಯ್ಯ, ಮುಖ್ಯಮಂತ್ರಿ