Advertisement

ಯಡ್ರಾಮಿ ತಾಲೂಕಲ್ಲಿ ಮೂಲಸೌಕರ್ಯ ಮರೀಚಿಕೆ; ಹೆಸರಿಗಷ್ಟೇ ತಾಲೂಕು

06:11 PM May 29, 2023 | Team Udayavani |

ಯಡ್ರಾಮಿ: ತಾಲೂಕು ರಚನೆಯಾಗಿ ನಾಲ್ಕು ವರ್ಷಗಳೇ ಕಳೆದರೂ ಮೂಲಭೂತ ಸೌಕರ್ಯಗಳು ಮರೀಚಿಕೆ ಎಂಬಂತಾಗಿದೆ. ತಾಲೂಕು ಕೇಂದ್ರ ಹೊಂದಿರಬೇಕಾದ ಮೂಲ ಸೌಲಭ್ಯಗಳು ಸಿಗದೇ ಹೆಸರಿಗಷ್ಟೇ ತಾಲೂಕು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿ ಸದ್ಯ ತಹಶೀಲ್ದಾರ್‌ ಕಚೇರಿ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಕಾರ್ಯಾಲಯಗಳನ್ನು ಹೊರತು ಪಡಿಸಿದರೆ ತಾಲೂಕು ಕೇಂದ್ರದಲ್ಲಿರಬೇಕಾದ ಕೃಷಿ ಸಹಾಯಕ ನಿರ್ದೇಶಕ ಕಚೇರಿ, ಬಿಇಒ,
ಅರಣ್ಯ, ಪೊಲೀಸ್‌ ವೃತ್ತ ನಿರೀಕ್ಷಕರ ಕಚೇರಿ, ಬಸ್‌ ಡಿಪೋ, ಉಪ ನೋಂದಣಿ ಕಚೇರಿ, ಭೂ ಮಾಪನ ಇಲಾಖೆ, ತೋಟಗಾರಿಕೆ, ಅಗ್ನಿಶಾಮಕ, ಸಮಾಜ ಕಲ್ಯಾಣ, ಲೋಕೋಪಯೋಗಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ಮಹಿಳಾ ಮತ್ತು ಮಕ್ಕಳ ಇಲಾಖೆ ಕಚೇರಿ ಸೇರಿದಂತೆ ಇತರೆ ಕಾರ್ಯಾಲಯಗಳನ್ನು ತೆರೆಯಬೇಕು.

Advertisement

ತಾಲೂಕಿನ ಜನತೆ ಈಗಲೂ ಸರಕಾರಿ ಕೆಲಸಗಳಿಗಾಗಿ ಜೇವರ್ಗಿಗೆ ತೆರಳುವುದು ಸಾಮಾನ್ಯವಾಗಿದೆ. ರೈತರು, ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು, ಅಂಗವಿಕಲರು ಪರದಾಡುವಂತಾಗಿದೆ. ಡಾ|ಅಜಯಸಿಂಗ್‌ ಮೂರನೇ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದು, ಈ ಬಾರಿಯಾದರೂ ತಾಲೂಕಿನಲ್ಲಿ ಎಲ್ಲ ಕಚೇರಿಗಳು ಆರಂಭವಾಗಲಿವೆ ಎಂಬ ನಿರೀಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.

ಈಗಾಗಲೇ ತಾಲೂಕು ಆಡಳಿತ ಸೌಧ ಹಾಗೂ ನ್ಯಾಯಾಲಯ ಕಟ್ಟಡದ ನಿರ್ಮಾಣಕ್ಕೆ ತಲಾ ಐದು ಎಕರೆ ಭೂಮಿ ಮಂಜೂರಾಗಿದೆ. ಸದ್ಯದ ರಾಜ್ಯ ಸರ್ಕಾರದಿಂದ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ತರುವಲ್ಲಿ ಡಾ| ಅಜಯಸಿಂಗ್‌ ಹೆಚ್ಚಿನ ಮುತುವರ್ಜಿ ವಹಿಸಿದರೆ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಧೋರಣೆ ಅನುಸರಿಸಿತ್ತು ಎಂಬುದು ಶಾಸಕರ ಪ್ರಬಲ ಆರೋಪ.

ಆದರೀಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದಿರುವುದರಿಂದ ಅನುದಾನ ತರುವಲ್ಲಿ ಯಾವ ಅಡೆತಡೆಯಾಗದು. ನೂತನ ಯಡ್ರಾಮಿ ತಾಲೂಕಿನ ಜನತೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಶಾಸಕ ಡಾ|ಅಜಯಸಿಂಗ್‌ ಇಚ್ಛಾಶಕ್ತಿ ತೋರಬೇಕು ಎಂಬುದು ಜನರ ಆಶಯವಾಗಿದೆ.

ಯಡ್ರಾಮಿ ತಾಲೂಕು ಎಂದು ಹೇಳಲು ನಾಚಿಕೆ ಬರುತ್ತಿದೆ. ತಾಲೂಕಾಗಿ ನಾಲ್ಕು ವರ್ಷಗಳೇ ಕಳೆದಿವೆ. ಆದರೆ ಅನೇಕ ಕಚೇರಿಗಳು ಇರದೇ ಇರುವುದರಿಂದ ಜೇವರ್ಗಿಗೆ ಅನಿವಾರ್ಯವಾಗಿ ತೆರಳಬೇಕಾಗುವ ದಯನೀಯ ಸ್ಥಿತಿ ಇಲ್ಲಿನ ಜನತೆಯದ್ದಾಗಿದೆ. ಶಾಸಕರು ಕೂಡಲೇ ತಾಲೂಕಿನಲ್ಲಿರಬೇಕಾದ ಎಲ್ಲ ಕಚೇರಿಗಳನ್ನು ಆರಂಭಿಸಿ ಜನರ ಗೋಳು ತಪ್ಪಿಸಬೇಕಿದೆ.
ಆನಂದ ಯತ್ನಾಳ, ಜೆಡಿಎಸ್‌ ಯುವ ಮುಖಂಡ

Advertisement

ಶಾಸಕ ಡಾ|ಅಜಯಸಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈ ಬಾರಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ
ಬಂದಿರುವುದರಿಂದ ಯಡ್ರಾಮಿಗೆ ಬೇಕಾದ ಅಗತ್ಯ ಅನುದಾನ ತಂದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತಾರೆನ್ನುವ ಅಚಲ ವಿಶ್ವಾಸವಿದೆ.
*ಮಲ್ಲಿಕಾರ್ಜುನ ಹಲಕರ್ಟಿ, ಕಾಂಗ್ರೆಸ್‌ ಮುಖಂಡ

ಈ ಬಾರಿ ಕಾಂಗ್ರೆಸ್‌ನ ಬಹುಮತದ ಸರ್ಕಾರ ಬಂದಿದೆ. ಯಡ್ರಾಮಿಯಲ್ಲಿ ಮಿನಿ ವಿಧಾನಸೌಧದ ಕಟ್ಟಡ ನಿರ್ಮಾಣ ಮಾಡುತ್ತೇವೆ. ಹೆಚ್ಚಿನ ಅನುದಾನದೊಂದಿಗೆ ತಾಲೂಕಿನಲ್ಲಿರಬೇಕಾದ ಕಚೇರಿ ಆರಂಭಕ್ಕೆ ಪ್ರಯತ್ನಿಸುತ್ತೇನೆ.
* ಡಾ|ಅಜಯಸಿಂಗ್‌, ಶಾಸಕ

*ಸಂತೋಷ ನವಲಗುಂದ

Advertisement

Udayavani is now on Telegram. Click here to join our channel and stay updated with the latest news.

Next