Advertisement

ವರ್ಷವಾದ್ರೂ ಪಾಲಿಕೆ ಸದಸ್ಯರಿಗಿಲ್ಲ ಅಧಿಕಾರ!

12:09 PM Jun 24, 2022 | Team Udayavani |

ಬೆಳಗಾವಿ: ಇದು ನಿಜಕ್ಕೂ ದುರ್ದೈವದ ಸಂಗತಿ. ಸಾಕಷ್ಟು ಪರಿಶ್ರಮಪಟ್ಟು ಚುನಾವಣೆಯಲ್ಲಿ ಗೆದ್ದರೂ ಅದರ ಆನಂದವನ್ನು ಅನುಭವಿಸಲಾಗದ ಸ್ಥಿತಿ. ಇವತ್ತಲ್ಲಾ ನಾಳೆ ಎಲ್ಲವೂ ಬಗೆಹರಿಯಬಹುದು ಎಂದು ಆಸೆಯಿಂದ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರೂ ನಿರಾಸೆಯ ದಿನಗಳು ಇನ್ನೂ ದೂರವಾಗಿಲ್ಲ.

Advertisement

ಇದು ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರ ಸ್ಥಿತಿ. ಚುನಾವಣೆಯಲ್ಲಿ ಗೆದ್ದು ಬಂದು ವರ್ಷ ಸಮೀಪಿಸುತ್ತಿದೆ. ಆದರೆ ಇವತ್ತಿಗೂ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರವಾಗಿಲ್ಲ. ಮಹಾಪೌರರ ಆಯ್ಕೆಯಾಗಿಲ್ಲ. ಹೇಳಿಕೊಳ್ಳಲು ನಾವು ಪಾಲಿಕೆ ಸದಸ್ಯರು ಎನ್ನುವಂತಿದ್ದರೂ ಅದರ ಅಧಿಕಾರ ಅನುಭವಿಸಲಾರದ ಸ್ಥಿತಿ ಇದೆ.

ಪಾಲಿಕೆಯ ಒಟ್ಟು 58 ಸದಸ್ಯರಲ್ಲಿ ಬಿಜೆಪಿ 35 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್‌ 10, ಎಐಎಂಐಎಂ ಒಂದು ಹಾಗೂ ಪಕ್ಷೇತರರು 12 ಜನ ಸದಸ್ಯರಿದ್ದಾರೆ. ಬಿಜೆಪಿ ಸಂಪೂರ್ಣ ಬಹುಮತ ಹೊಂದಿದ್ದರೂ ಪಕ್ಷದ ಸದಸ್ಯರಿಗೆ ಅಧಿಕಾರ ಎಂಬುದು ಗಗನಕುಸುಮವಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಮತ್ತು ಉಪಮಹಾಪೌರರ ಆಯ್ಕೆ ವಿಷಯ ಅನಗತ್ಯವಾಗಿ ವಿಳಂಬವಾಗುತ್ತಿರುವುದಕ್ಕೆ ಸ್ಥಳೀಯ ಬಿಜೆಪಿ ಶಾಸಕರ ಹಸ್ತಕ್ಷೇಪವೇ ಮುಖ್ಯ ಕಾರಣ ಎಂಬ ಆರೋಪ ಬಲವಾಗಿದೆ. ಮಹಾಪೌರರ ಚುನಾವಣೆ ಬಗ್ಗೆ ಶಾಸಕರಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಸರ್ಕಾರ ಸಹ ಇದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಪಾಲಿಕೆಯು ತಮ್ಮ ಹಿಡಿತದಲ್ಲೇ ಇರಬೇಕು ಎಂಬ ಉದ್ದೇಶದಿಂದ ಶಾಸಕರು ಮಹಾಪೌರ ಚುನಾವಣೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಮೂಲಕ ಪಾಲಿಕೆಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸತೀಶ ಜಾರಕಿಹೊಳಿ ಹೇಳಿದ್ದೇನು?: ಕಳೆದ ಕೆಲ ತಿಂಗಳ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಳಗಾವಿ ಪಾಲಿಕೆಯಲ್ಲಿ ಸದಸ್ಯರೇ ಇಲ್ಲ. ಶಾಸಕ ಅಭಯ ಪಾಟೀಲ ಮಹಾಪೌರ ಮತ್ತು ಅನಿಲ ಬೆನಕೆ ಉಪಮಹಾಪೌರ ಎಂದು ವ್ಯಂಗವಾಗಿ ಹೇಳಿದ್ದರು. ಮಹಾಪೌರ ಚುನಾವಣೆ ವಿಷಯದಲ್ಲಿ ಶಾಸಕರ ನಿಗೂಢ ನಡೆ ಈ ಮಾತಿಗೆ ಪುಷ್ಟಿ ನೀಡಿದೆ.

Advertisement

ಇನ್ನೊಂದು ಕಡೆ ಶಾಸಕರ ಈ ನಡವಳಿಕೆ ಪಾಲಿಕೆಯ ಬಿಜೆಪಿ ಸದಸ್ಯರಲ್ಲಿ ತೀವ್ರ ಅಸಮಾಧಾನ ಹುಟ್ಟುಹಾಕಿದೆ. ಅದರೆ ಇದುವರೆಗೆ ಯಾರೂ ಬಹಿರಂಗವಾಗಿ ಹೇಳಿಕೊಂಡಿಲ್ಲ ಅಷ್ಟೆ. ಪಕ್ಷದ ಒಂದೆರಡು ಸಭೆಯಲ್ಲಿ ಮಹಾಪೌರರ ಆಯ್ಕೆ ಬಗ್ಗೆ ಚರ್ಚೆ ನಡೆದಿದೆಯಾದರೂ ಅದು ದೀರ್ಘ‌ಕ್ಕೆ ಹೋಗದಂತೆ ನೋಡಿಕೊಳ್ಳುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಆದರೆ ತೆರೆಮರೆಯಲ್ಲಿ ನಡೆದಿರುವ ರಾಜಕೀಯ ಚಟುವಟಿಕೆಗಳು ಮುಂದೆ ಮಹತ್ತರ ಬದಲಾವಣೆಯಾಗುವ ಸುಳಿವು ನೀಡಿವೆ. ಹಿಂದಿನ ಸದಸ್ಯರ ಅವಧಿ 2019ರ ಮಾರ್ಚ್‌ನಲ್ಲಿ ಕೊನೆಗೊಂಡಿತ್ತು. ನಂತರ ಮೀಸಲಾತಿ, ಕೊರೊನಾ ಮತ್ತಿತರ ಕಾರಣಗಳಿಂದ ಚುನಾವಣೆ ವಿಳಂಬವಾಗಿ ಕೊನೆಗೆ 2021, ಸೆ.3 ರಂದು ಚುನಾವಣೆ ನಡೆದು ಸೆ.6ರಂದು ಫಲಿತಾಂಶ ಪ್ರಕಟವಾಗಿತ್ತು.

ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ನಡೆದು ಮೂರು ವರ್ಷಗಳೇ ಆಗಿವೆ. ಚುನಾಯಿತ ಪ್ರತಿನಿಧಿಗಳಿದ್ದರೂ ಅಧಿಕಾರ ನಡೆಸುವುದು ಸದಸ್ಯರಿಗೆ ಸಾಧ್ಯವಾಗಿಲ್ಲ. ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳಿಗೆ ಮೀಸಲಾತಿ ಪ್ರಕಟ ಮಾಡಿ ಹಲವು ತಿಂಗಳು ಕಳೆದಿದ್ದರೂ ಇದರ ಚುನಾವಣೆಗೆ ಮುಹೂರ್ತ ಕೂಡಿ ಬಂದಿಲ್ಲ. ಸದಸ್ಯರು ಪ್ರಮಾಣ ವಚನ ಸ್ವೀಕಾರ ಮಾಡದೇ ಇರುವ ಕಾರಣ ಅವರು ಅಧಿಕೃತವಾಗಿ ಅಧಿಕಾರ ಚಲಾಯಿಸುವಂತಿಲ್ಲ. ಇದರಿಂದ ನಗರದ ಪ್ರತಿ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿಲ್ಲ. ಸಾಮಾನ್ಯ ಸಭೆಗಳು ನಡೆಯುತ್ತಿಲ್ಲ. ಹೀಗಾಗಿ ಪಾಲಿಕೆಯ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಗ್ರಹಣ ಹಿಡಿದಂತಾಗಿದೆ.

ಎಂಟು ಸದಸ್ಯರು ಕಾಂಗ್ರೆಸ್‌ ಕಡೆಗೆ?

ಮೂಲಗಳ ಪ್ರಕಾರ ಮಹಾಪೌರರ ಚುನಾವಣೆ ವಿಷಯದಲ್ಲಿ ಬಿಜೆಪಿ ಶಾಸಕರ ನಿರಾಸಕ್ತಿ ಹಾಗೂ ಹಸ್ತಕ್ಷೇಪದಿಂದ ಅಸಮಾಧಾನಗೊಂಡಿರುವ ಬಿಜೆಪಿಯ ಎಂಟು ಸದಸ್ಯರು ಕಾಂಗ್ರೆಸ್‌ ಕಡೆ ಮುಖ ಮಾಡಿದ್ದಾರೆ. ಇದರಲ್ಲಿ ಬೆಳಗಾವಿ ಉತ್ತರ ಕ್ಷೇತ್ರದ ಐವರು ಮತ್ತು ದಕ್ಷಿಣ ಕ್ಷೇತ್ರದ ಮೂವರು ಸದಸ್ಯರಿದ್ದಾರೆ. ಈ ಎಲ್ಲ ಸದಸ್ಯರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಜತೆ ಆತ್ಮೀಯವಾಗಿ ಗುರುತಿಸಿಕೊಂಡಿರುವುದು ಗಮನಿಸಬೇಕಾದ ಸಂಗತಿ. ಇದಲ್ಲದೆ ನೇಕಾರ ಸಮುದಾಯದ ಜತೆ ಸಹ ಸತೀಶ ಜಾರಕಿಹೊಳಿ ನಿಕಟ ಸಂಪರ್ಕ ಹೊಂದಿದ್ದಾರೆ. ವಿನಾಕಾರಣ ಮಹಾಪೌರ ಚುನಾವಣೆಯನ್ನು ಮುಂದೂಡುತ್ತಿರುವ ಬಿಜೆಪಿಗೆ ಈ ಎಲ್ಲ ಅಂಶಗಳು ಮುಳುವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಅಸಲಿ ಕಾರಣ ಏನು?

ಇನ್ನೊಂದು ಕಡೆ ಪಾಲಿಕೆಯಲ್ಲಿ ಏನೇ ಆಗಲಿ ಮೊದಲ ಬಾರಿಗೆ ಕಾಂಗ್ರೆಸ್‌ ಪಕ್ಷದವರೇ ಮಹಾಪೌರ ಹಾಗೂ ಉಪ ಮಹಾಪೌರರಾಗಬೇಕು ಎಂದು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಈ ನಿಟ್ಟಿನಲ್ಲಿ ಈಗಾಗಲೇ ಸಭೆ ಸಹ ಮಾಡಿದ್ಧಾರೆ. ಚುನಾವಣೆ ನಡೆದರೆ ತಮ್ಮ ಗುಂಪಿಗೆ ಹಿನ್ನಡೆಯಾಗಲಿದೆ. ತಮ್ಮ ಬೆಂಬಲಿಗರು ಮಹಾಪೌರರಾಗಿ ಆಯ್ಕೆಯಾಗುವುದು ಅನುಮಾನ ಎಂಬುದು ಸ್ಥಳೀಯ ಬಿಜೆಪಿ ಶಾಸಕರಿಗೆ ಮನವರಿಕೆಯಾಗಿದೆ. ಇದೇ ಕಾರಣದಿಂದ ಶಾಸಕರು ಹಾಗೂ ಸರ್ಕಾರ ಈಗ ಮಹಾಪೌರರ ಚುನಾವಣೆಗೆ ಒಬಿಸಿ ಕೋಟಾ ನೆಪ ಮುಂದೆ ಮಾಡಿದೆ. ಇದು ಬಿಜೆಪಿ ಸದಸ್ಯರಲ್ಲಿ ಮತ್ತಷ್ಟು ಬೇಸರ ಉಂಟುಮಾಡಿದೆ.

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next