ಬೆಂಗಳೂರು: ಕರ್ನಾಟಕ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಸರಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ ಚುನಾವಣ ನೀತಿ ಸಂಹಿತೆ ಇರುವುದರಿಂದ ಜೂನ್ 6ರ ವರೆಗೆ ರಾಜ್ಯ ಸರಕಾರದಿಂದ ಯಾವುದೇ ಕ್ರಮ ಆಗುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಎಚ್.ಕಾಂತರಾಜ್ ಆಯೋಗದ ಅಂಕಿಅಂಶಗಳನ್ನು ಆಧರಿಸಿ ಸಿದ್ಧಪಡಿಸಲಾದ ಜಾತಿ ಗಣತಿ ವರದಿಯನ್ನು ಆಕ್ಷೇಪಿಸಿ ಸಮಾಜ ಸಂಪರ್ಕ ವೇದಿಕೆ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ| ಎನ್.ವಿ.ಅಂಜಾರಿಯಾ ಹಾಗೂ ನ್ಯಾ| ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಅರ್ಜಿದಾರರ ಪರ ವಕೀಲ ಅಭಿಷೇಕ್ ಕುಮಾರ್, ಕಾಂತರಾಜ್ ವರದಿ ಸಲ್ಲಿಸುವಾಗ ಆಯೋಗದ ಕಾರ್ಯದರ್ಶಿ ಸಹಿ ಇರಲಿಲ್ಲ. ಅದೇ ಆಧಾರದಲ್ಲಿ ಈಗ ವರದಿ ಸಲ್ಲಿಸಲಾಗಿದೆ. ನಮಗೆ ವರದಿ ಬಗ್ಗೆ ಆತಂಕವಿದೆ. ಆಯೋಗ ಸ್ವತಂತ್ರವಾಗಿ ಸಮೀಕ್ಷೆ ನಡೆಸಿದೆಯೋ ಅಥವಾ ಸರಕಾರದ ಅಣತಿಯಂತೆ ಆಗಿದೆಯೇ ಎಂಬ ಅನುಮಾನವಿದೆ. ವರದಿಯು ಚುನಾವಣೆ ಮೇಲೆ ಇದು ಪರಿಣಾಮ ಬೀರಬಹುದು. ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ವರದಿ ಸ್ವೀಕರಿಸಲಾಗಿದೆ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಡ್ವೊಕೇಟ್ ಜನರಲ್, ಚುನಾವಣೆ ನಡೆಯುವುದಕ್ಕೂ ವರದಿಯನ್ನು ಸರಕಾರ ಸ್ವೀಕರಿಸುವುದಕ್ಕೂ ಸಂಬಂಧವಿಲ್ಲ. ನೀತಿ ಸಂಹಿತೆ ಜಾರಿ ಇರುವಾಗ ಸಚಿವ ಸಂಪುಟ ಸಭೆ ನಡೆಸಲಾಗುವುದಿಲ್ಲ. ಸಮೀಕ್ಷೆ ವರದಿಗೆ ಸಂಬಂಧಿಸಿ ಜೂನ್ 6ರ ವರೆಗೆ ಸರಕಾರದಿಂದ ಯಾವ ಕ್ರಮವೂ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಆಯೋಗದ ಪರ ಹಿರಿಯ ವಕೀಲ ಪ್ರೊ| ರವಿವರ್ಮ ಕುಮಾರ್ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸರಕಾರದ ಗೃಹ ಕಾರ್ಯದರ್ಶಿ, ಭಾರತೀಯ ಜನಗಣತಿ ಆಯೋಗ, ರಾಜ್ಯ ಸರಕಾರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತು. ಇದೇ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಇತರ ಅರ್ಜಿಗಳ ಜತೆಗೆ ಸಮಾಜ ಸಂಪರ್ಕ ವೇದಿಕೆ ಸಲ್ಲಿಸಿದ ಅರ್ಜಿಯನ್ನೂ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಹೇಳಿ, ವಿಚಾರಣೆಯನ್ನು ಮುಂದೂಡಿತು.