ಮದ್ದೂರು: ಜಲ ಜೀವನ್ ಮಿಷನ್ ಯೋಜನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳು ಅದ್ವಾನಗೊಂಡಿದ್ದರೂ, ಇದುವರಿಗೂ ಕ್ರಮವಹಿಸದ ಜಿಪಂ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ದಾಖಲಿಸುವುದಾಗಿ ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದ ಅಧ್ಯಕ್ಷ ಜಿ.ಎನ್.ಸತ್ಯ ತಿಳಿಸಿದರು.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಗ್ರಾಪಂ ಸದಸ್ಯರ ಒಕ್ಕೂಟದ ಪದಾಧಿಕಾರಿಗಳ ಹಾಗೂ ಪಿಡಿಒ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಜಲ ಜೀವನ್ ಯೋಜನೆಯ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಳಪೆ ಗುಣಮಟ್ಟದ ಕಾಮಗಾರಿ ನಡೆಯುವ ಜತೆಗೆ ಯಾವುದೇ ಕಾಮಗಾರಿಯನ್ನು ಪೂರ್ಣಗೊಳಿಸದೆ, ನಿರ್ಲಕ್ಷ್ಯ ವಹಿಸಿರುವ ಗ್ರಾಮೀಣ ಕುಡಿಯುವ ನೀರು ಎಇಇ ಕೋದಂಡ ರಾಮ ಅವರನ್ನು ತರಾಟೆಗೆ ತೆಗೆದುಕೊಂಡರು.
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಗೊಳಿಸುವಂತೆ ಮತ್ತು ಜಲ ಜೀವನ್ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಪೂರೈಕೆಗೆ ಹಲವು ಬಾರಿ ಮನವಿ ಮಾಡಿದ್ದರೂ, ಕ್ರಮವಹಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತ ತನಿಖೆಗೆ ಒಕ್ಕೂಟವು ನಿರ್ಣಯ ಕೈಗೊಂಡಿರುವುದಾಗಿ ಹೇಳಿದರು. ಗ್ರಾಪಂನಲ್ಲಿ ಲಕ್ಷಾಂತರ ತೆರಿಗೆ ಹಣ ಬಾಕಿ: 42 ಗ್ರಾಪಂ ವ್ಯಾಪ್ತಿಗಳಲ್ಲಿ ಕರ್ತವ್ಯ ನಿರ್ವಹಿಸುವ ಪಿಡಿಒಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂನಲ್ಲಿ ಲಕ್ಷಾಂತರ ತೆರಿಗೆ ಹಣ ಬಾಕಿ ಉಳಿದಿದೆ. ಇದರಿಂದಾಗಿ ಗ್ರಾಮದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ. ಯಾವುದೇ ತೆರಿಗೆಯನ್ನು ಪಾವತಿಸದಿದ್ದರೂ ಉಳ್ಳವರಿಗೆ ಪರವಾನಗಿ ನೀಡುತ್ತಿದೆ. ಬಡ ವರ್ಗದವರು, ಕೂಲಿ ಕಾರ್ಮಿಕರು ಇನ್ನಿತರೆ ಸೌಲಭ್ಯ ಪಡೆಯಲು ಕಚೇರಿಗೆ ತೆರಳಿದರೆ, ತೆರಿಗೆ ಪಾವತಿಸುವ ಜತೆಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದಾಗಿ ಆರೋಪಿಸಿದರು.
ಕಾಟಾಚಾರಕ್ಕೆ ನೋಟಿಸ್: ತಾಲೂಕಿನ ಕೌಡ್ಲೆ ಗ್ರಾಮದಲ್ಲಿರುವ ಅಕ್ಷರ ವಿದ್ಯಾ ಸಂಸ್ಥೆಯು ಹಲವು ವರ್ಷಗಳಿಂದಲೂ ತೆರಿಗೆ ಪಾವತಿಸದೆ ಲಕ್ಷಾಂತರ ರೂ. ಬಾಕಿ ಉಳಿಸಿಕೊಂಡಿದೆ. ಸ್ಥಳೀಯ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿದ್ದು, ಕೇವಲ ಕಾಟಾಚಾರಕಷ್ಟೇ ನೋಟಿಸ್ ನೀಡಿ ವಾಪಸ್ಸಾಗುವ ಅಧಿಕಾರಿಗಳು ತೆರಿಗೆ ವಸೂಲಾತಿಗೆ ಮುಂದಾಗದೆ, ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದಾಗಿ ದೂರಿದರು.
ಕೂಡಲೇ ಗ್ರಾಪಂ ಅಧ್ಯಕ್ಷರು ಸೇರಿದಂತೆ ಸದಸ್ಯರು, ಪಿಡಿಒಗಳ ಸಭೆ ಕರೆದು ಗ್ರಾಮಗಳಲ್ಲಿರುವ ಮೂಲ ಸೌಲಭ್ಯಗಳ ಕೊರತೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೇಲಧಿಕಾರಿಗಳು ಚರ್ಚೆ ನಡೆಸುವಂತೆ ಮತ್ತು ತಾಪಂ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಟ್ಟಿಗೆ ಚರ್ಚಿಸಿ, ಅಂಗೀಕರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ವಿವಿಧ ಗ್ರಾಪಂ ಪಿಡಿಒಗಳು, ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಕೈಗೊಳ್ಳ ಬೇ ಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು. ನರೇಗಾ ಯೋಜನೆ ವ್ಯವಸ್ಥಾಪಕ ಮಂಜುನಾಥ್, ಒಕ್ಕೂಟದ ಅಧ್ಯಕ್ಷ ಸತ್ಯಪ್ಪ, ಉಪಾಧ್ಯಕ್ಷ ಮಾದರಹಳ್ಳಿ ಕೃಷ್ಣ, ಪದಾಧಿಕಾರಿಗಳಾದ ರಾಮಕೃಷ್ಣ, ಮಹೇಶ್, ದಯಾನಂದ, ಶಿವಲಿಂಗಯ್ಯ, ನಳಿನಿ, ಚಂದ್ರಶೇಖರ್, ವಿಜಿಕುಮಾರ್, ನಂದೀಶ್‌ಗೌಡ, ಜಗದೀಶ್ ಹಾಜರಿದ್ದರು.