ಬೆಂಗಳೂರು: ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹಿರಿಯ ನಾಯಕರು ತುಸು ಅಸಮಾಧಾನಗೊಂಡಿದ್ದು, ಈಗಾಗಲೇ ಸಂಪುಟ ಸೇರಿದ ಸಚಿವರಿಗೆ ಮುಂದಿನ ಶುಕ್ರವಾರದವರೆಗೂ ಖಾತೆ ಹಂಚಿಕೆಯಾಗುವುದು ಅನುಮಾನವಾಗಿದೆ.
ಜಾತಿ ಹಾಗೂ ಪ್ರದೇಶದ ಆಧಾರದ ಮೇಲೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವುದು ವರಿಷ್ಠರಿಗಿಂತಲೂ ಹೆಚ್ಚಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಬೆಂಗಳೂರು ಹಾಗೂ ಹಳೆ ಮೈಸೂರು ಭಾಗದಿಂದ ಯಾರಿಗೆ ಸ್ಥಾನ ನೀಡಬೇಕೆಂಬ ವಿಚಾರದಲ್ಲಿ ಇವರಿಬ್ಬರ ಮಧ್ಯೆ ಒಮ್ಮತ ಮೂಡಿಲ್ಲ ಎಂದು ಹೇಳಲಾಗುತ್ತಿದೆ.
ಉತ್ತರ ಕರ್ನಾಟಕ ಭಾಗಕ್ಕೆ ಹಾಗೂ ಲಿಂಗಾಯತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂಬ ಕೂಗು ಬಲವಾಗಿದೆ. 8 ಜನರಲ್ಲಿ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಹಾಗೂ ಸತೀಶ್ ಜಾರಕಿಹೊಳಿ ಮಾತ್ರ ಉತ್ತರ ಕರ್ನಾಟಕ ಪ್ರತಿನಿಧಿಸುತ್ತಿದ್ದಾರೆ. ಕರಾವಳಿ ಹಾಗೂ ಮಧ್ಯ ಕರ್ನಾಟಕಕ್ಕೆ ಇನ್ನೂ ಪ್ರಾತಿನಿಧ್ಯ ಸಿಕ್ಕಿಲ್ಲ. ಬೆಂಗಳೂರಿನಿಂದ ಮೂರು ಜನರಿಗೆ ಅವಕಾಶ ಕಲ್ಪಿಸಲಾಗಿದ್ದು, ಇನ್ನೂ ಇಬ್ಬರು ಸೇರ್ಪಡೆಯಾಗುವ ನಿರೀಕ್ಷೆ ಇದೆ. ಅದೇ ರೀತಿ ಮಂಡ್ಯ, ಮೈಸೂರು, ಚಾಮರಾಜನಗರದಿಂದ ಯಾರಿಗೆ ಪ್ರಾತಿನಿಧ್ಯ ಸಿಗಬಹುದೆಂಬ ಕುತೂಹಲ ಸೃಷ್ಟಿಯಾಗಿದೆ.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬುಧವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ. ಶುಕ್ರವಾರದ ಹೊತ್ತಿಗೆ ಇನ್ನಷ್ಟು ಜನರು ಸಂಪುಟ ಸೇರ್ಪಡೆಯಾಗಬಹುದು. ಅದೇ ದಿನ ಎಂಟು ಸಚಿವರಿಗೆ ಖಾತೆ ಹಂಚಿಕೆಯಾಗಲಿದೆ ಎಂದು ತಿಳಿದು ಬಂದಿದೆ.