ಜೈಪುರ: ಚಂಡೀಗಢ – ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಸಿಯಿಲ್ಲದೆ ಪ್ರಯಾಣಿಕರು ಪರದಾಡಿದ ಸ್ಥಿತಿ ಬಗ್ಗೆ ಕಾಂಗ್ರೆಸ್ ನಾಯಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಪಂಜಾಬ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ಅವರು ಶನಿವಾರ ಚಂಡೀಗಢ – ಜೈಪುರಕ್ಕೆ ಪ್ರಯಾಣಿಸಿದ ಇಂಡಿಗೋ ವಿಮಾನದಲ್ಲಿ ಎಸಿಯಿಲ್ಲದ ಬಗ್ಗೆ ಬರೆದುಕೊಂಡಿದ್ದಾರೆ.
6E7261 ನಂಬರ್ ನ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ ಅನುಭವ ಅತ್ಯಂತ ಭಯಾನಕವಾಗಿತ್ತು ಎಂದಿದ್ದಾರೆ.
“ಮೊದಲು ಪ್ರಯಾಣಿಕರನ್ನು 10-15 ನಿಮಿಷ ಬಿಸಿಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ. ವಿಮಾನ ಎಸಿ ಆನ್ ಆಗದೆಯೇ ಟೀಕ್ ಆಫ್ ಆಗಿದೆ. ಇದರಿಂದ ಪ್ರಯಾಣಿಕರಿಗೆ ಕಷ್ಟವಾಗಿದೆ. ಈ ಬಗ್ಗೆ ಯಾವ ಪ್ರಯಾಣಿಕರು ಆ ವೇಳೆ ಮಾತನಾಡಲಿಲ್ಲ. ಈ ಸಮಸ್ಯೆಯನ್ನು ಸರಿ ಮಾಡುವ ಬದಲು ಸಿಬ್ಬಂದಿಗಳು ಪ್ರಯಾಣಿಕರಿಗೆ ಬೆವರು ಒರೆಸಲು ಟಿಶ್ಯೂ ಪೇಪರ್ ನೀಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ನಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮತ್ತು ವಿಮಾನಯಾನ ಸಂಸ್ಥೆಯನ್ನು ಟ್ಯಾಗ್ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇಂಡಿಗೋ ವಿಮಾನದಲ್ಲಿ ಇತ್ತೀಚೆಗೆ ನಡೆದ ತಾಂತ್ರಿಕ ಸಮಸ್ಯೆಯ ಮೂರನೇ ಘಟನೆ ಇದಾಗಿದೆ. ದೆಹಲಿಗೆ ಹಾರುತ್ತಿದ್ದ ಇಂಡಿಗೋ ವಿಮಾನವನ್ನು ಶುಕ್ರವಾರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು. ಎರಡನೇ ಘಟನೆಯಲ್ಲಿ ರಾಂಚಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದ ಟೇಕ್ ಆಫ್ ಆದ ಒಂದು ಗಂಟೆಯೊಳಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಮರಳಿತ್ತು.