ನವದೆಹಲಿ: ರಾಷ್ಟ್ರಪತಿ ಚುನಾವಣೆಗಾಗಿ “ದಲಿತ ಕಾರ್ಡ್’ ಪ್ರಯೋಗಿಸಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ತಂತ್ರ ಹೆಚ್ಚು ಕಡಿಮೆ ಫಲಿಸಿದೆ.
ಬಿಹಾರದ ಮಾಜಿ ರಾಜ್ಯಪಾಲರೂ ಆಗಿರುವ ರಾಮನಾಥ್ ಕೋವಿಂದ್ ಅವರಿಗೆ ಬೆಂಬಲ ನೀಡುವುದಾಗಿ ಅಲ್ಲಿನ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರ ನೇತೃತ್ವದ ಸಂಯಕ್ತ ಜನತಾ ದಳ(ಜೆಡಿಯು) ಘೋಷಿಸಿದೆ. ಬುಧವಾರ ಬೆಳಗ್ಗೆಯಷ್ಟೇ ಶಾಸಕರ ಸಭೆ ನಡೆಸಿದ್ದ ನಿತೀಶ್‌ಕುಮಾರ್, ಕೋವಿಂದ್ ಅವರಿಗೇ ಬೆಂಬಲ ನೀಡುವ ಬಗ್ಗೆ ನಿರ್ಧರಿಸಿದ್ದರು. ಜೆಡಿಯು ಶಾಸಕರೊಬ್ಬರು ಸಭೆಯ ಬಗ್ಗೆ ಮಾಹಿತಿ ನೀಡಿ, ಕೋವಿಂದ್ ಅವರಿಗೆ ಬೆಂಬಲ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಹೇಳಿದ್ದರು.
ಆದರೆ, ಈ ಬಗ್ಗೆ ಮಾತನಾಡಿದ್ದ ಪಕ್ಷದ ವಕ್ತಾರ ಕೆ.ಸಿ. ತ್ಯಾಗಿ, ಸಂಜೆ ನಡೆಯಲಿರುವ ಕೋರ್ ಕಮಿಟಿ ಸಭೆ ನಂತರ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಹೇಳಿದ್ದರು. ಅದರಂತೆ, ಬುಧವಾರ ಸಂಜೆ ರಾಮ್‌ನಾಥ್ ಕೋವಿಂದ್ ಅವರಿಗೆ ಬೆಂಬಲ ನೀಡುವ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೆ.ಸಿ. ತ್ಯಾಗಿ ಮಾಹಿತಿ ನೀಡಿದ್ದಾರೆ.
ಅಲ್ಲದೆ, ಗುರುವಾರ ದೆಹಲಿಯಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
– ರಾಷ್ಟ್ರಪತಿ ಸ್ಥಾನದ ಎನ್‌ಡಿಎ ಅಭ್ಯರ್ಥಿ ರಾಮ್‌ನಾಥ್‌ಗೆ ಹೆಚ್ಚುತ್ತಿದೆ ಬಲ
– ಇದೀಗ ನಿತೀಶ್‌ಕುಮಾರ್ ನೇತೃತ್ವದ ಜೆಡಿಯುನಿಂದಲೂ ಬೆಂಬಲ