ಪಾಟ್ನಾ:ದೇಶದಲ್ಲಿ ಕೋವಿಡ್ 19 ಸೋಂಕು ಹರಡುತ್ತಿದ್ದು, ಲಾಕ್ ಡೌನ್ ಆಗಿದ್ದ ಸಂದರ್ಭದಲ್ಲಿ ಕೆಲಸ ಇಲ್ಲದೆ ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಆಗಿದ್ದರು. ಆದರೆ ಕೋವಿಡ್ ಹೆದರಿಕೆಯಿಂದ ಜೆಡಿಯು ಬಾಸ್(ನಿತೀಶ್) ನಾಲ್ಕು ತಿಂಗಳ ಕಾಲ ಮನೆಯೊಳಗೆ ಇದ್ದಿದ್ದು, ಈಗ ಮತ ಕೇಳಲು ಹೊರಗೆ ಬಂದಿದ್ದಾರೆ ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ ನಿತೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ನವಾಡಾ ಜಿಲ್ಲೆಯಲ್ಲಿ ಶುಕ್ರವಾರ(ಅಕ್ಟೋಬರ್ 23,2020) ಆಯೋಜಿಸಿದ್ದ ಚುನಾವಣಾ ಪ್ರಚಾರ ರಾಲಿಯಲ್ಲಿ ಮಾತನಾಡಿದ್ದ ತೇಜಸ್ವಿ, ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಆಗಿದ್ದರು ಕೂಡಾ ನಿತೀಶ್ ಮನೆಯೊಳಗೆ ಸೇರಿಕೊಂಡಿದ್ದರು. ಸಾರ್ವಜನಿಕರ ಜತೆಗಿನ ಸಂಪರ್ಕದಿಂದ ದೂರ ಉಳಿದುಬಿಟ್ಟಿದ್ದು ಯಾಕೆ? ಸುಮಾರು 84 ದಿನಗಳ ಬಳಿಕ ಮನೆಯಿಂದ ಹೊರಬಂದು 20 ಮೀಟರ್ ಅಂತರದಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ಆಗಮಿಸಿರುವುದಾಗಿ ಆರೋಪಿಸಿದರು.
ನಿತೀಶ್ ಕುಮಾರ್ ಅವರು 144 ದಿನಗಳ ಕಾಲ ಮನೆಯಲ್ಲಿದ್ದರು. ಆದರೆ ಈಗ ಮನೆಯಿಂದ ಹೊರಬಂದಿದ್ದು ಯಾಕೆ? ಆಗಲೂ ಕೋವಿಡ್ ಇತ್ತು, ಈಗಲೂ ಕೋವಿಡ್ ಇದೆ. ಆದರೆ ಈಗ ನಿತೀಶ್ ಜೀಗೆ ನಿಮ್ಮ ಮತ ಬೇಕಾಗಿದೆ. ಹೀಗಾಗಿ ಹೊರಗೆ ಕಾಲಿಟ್ಟಿದ್ದಾರೆ ಎಂದು ತೇಜಸ್ವಿ ಚಾಟಿ ಬೀಸಿದರು.
ಇದನ್ನೂ ಓದಿ:ಮೊಬೈಲ್ ಬಳಸಿಲ್ಲ, ಸಿನಿಮಾಗೆ ಹೋಗಲ್ಲ; ಖೇಲ್ ರತ್ನ ಭಜರಂಗಿಯ ಹಿಂದಿದೆ ಕಠಿಣ ಪರಿಶ್ರಮ
ಜೂನ್ ತಿಂಗಳಿನಲ್ಲಿ ನಿತೀಶ್ ಕುಮಾರ್ ಅವರು ಹೊರಗೆ ಬಂದಿದ್ದ ವೇಳೆ ತೇಜಸ್ವಿ ಯಾದವ್ ಟ್ವೀಟ್ ಮೂಲಕ ಅಣಕಿಸಿದ್ದು, ನಿಮಗೆ ಹೊರಗೆ ಬರಲು ಭಯವಾಗುತ್ತಿದೆಯಾ? ನಾನು ನಿಮ್ಮ ಜತೆ ಬರಲು ಸಿದ್ಧ” ಎಂದು ತಿಳಿಸಿದ್ದರು.
ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೆ ಸುಮಾರು 32 ಲಕ್ಷ ಮಂದಿ ವಲಸೆ ಕಾರ್ಮಿಕರು ಬಿಹಾರಕ್ಕೆ ವಾಪಸ್ ಆಗಿದ್ದರು. ಈ ಸಂದರ್ಭದಲ್ಲಿ ನಿತೀಶ್ ನೇತೃತ್ವದ ರಾಜ್ಯ ಸರ್ಕಾರ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೂ ಈಗಲೂ ಬಹುತೇಕರಿಗೆ ಕೆಲಸ ಇಲ್ಲದಂತಾಗಿದೆ ಎಂದು ತೇಜಸ್ವಿ ದೂರಿದ್ದಾರೆ.