ಬೆಂಗಳೂರು: ಅತ್ಯಾಚಾರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದ ಆರೋಪಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ “ಆಧ್ಯಾತ್ಮಿಕ ಪ್ರವಾಸ’ದಲ್ಲಿದ್ದಾರೆ ಎಂದು ಸಿಐಡಿ ಹೈಕೋರ್ಟ್‌ಗೆ ತಿಳಿಸಿದೆ.
ಪ್ರಕರಣ ಸಂಬಂಧ ನಿತ್ಯಾನಂದ ಸ್ವಾಮೀಜಿಗೆ 2010ರಲ್ಲಿ ಮಂಜೂರು ಮಾಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ ಜಾಮೀನು ರದ್ದುಕೋರಿ ಸಲ್ಲಿಸಿದ ಅರ್ಜಿ ಸಂಬಂಧದ ತೀರ್ಪನ್ನು ಕಾಯ್ದಿರಿಸಿತು.
ವಿಚಾರಣೆ ವೇಳೆ, ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಸಿಐಡಿ ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ.ಬಾಲರಾಜ್ ನ್ಯಾಯಪೀಠಕ್ಕೆ ವರದಿ ಸಲ್ಲಿಸಿ, ನ್ಯಾಯಾಲಯದ ಜ.31ರ ಆದೇಶದಂತೆ ಶುಕ್ರವಾರ ಬಿಡದಿ ಧ್ಯಾನಪೀಠ ಆಶ್ರಮಕ್ಕೆ ತೆರಳಿದ್ದೆವು. ಆದರೆ, ಆರೋಪಿಯಾದ ಸ್ವಾಮೀಜಿ ಇರಲಿಲ್ಲ. ಅವರು ಆಧ್ಯಾತ್ಮಿಕ ಪ್ರವಾಸದಲ್ಲಿ ಇದ್ದಾರೆ. ಹೀಗಾಗಿ ಅವರ ಪರವಾಗಿ ಆಶ್ರಮದಲ್ಲಿದ್ದ ಕುಮಾರಿ ಅರ್ಚನಾನಂದಗೆ ನೋಟಿಸ್ ನೀಡಲಾಗಿದೆ ಪೀಠಕ್ಕೆ ತಿಳಿಸಿದರು.
ಆಗ, ಕೋರ್ಟ್ ಮುಂದೆ ಹಾಜರಾದ ಅರ್ಚನಾನಂದ ಪ್ರಮಾಣಪತ್ರ ಸಲ್ಲಿಸಿ, ನೋಟಿಸ್ ಪಡೆಯುವಂತೆ ಪೊಲೀಸರು ತಮಗೆ ಒತ್ತಾಯ ಮಾಡಿದರು. ನಿತ್ಯಾನಂದ ಸ್ವಾಮೀಜಿ ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅವರಿಗೆ ಹೇಗೆ ತಲುಪಿಸಲಿ ಎಂದರು.
ಅದಕ್ಕೆ ಬಾಲರಾಜ್ ವಿರುದ್ಧ ಗರಂ ಆದ ನ್ಯಾಯಪೀಠ, ನೋಟಿಸ್ ತಲುಪಿಸುವ ವಿಧಾನ ಇದೇನಾ? ಇದೇ ಮೊದಲ ಬಾರಿಗೆ ಕೋರ್ಟ್ ನೋಟಿಸ್ ತಲುಪಿಸುತ್ತೀದ್ದೀರಾ? ಈ ರೀತಿ ಮಾಡಿದರೆ ಕೋರ್ಟ್ ಆದೇಶ ಪಾಲಿಸಿದಂತಾಗುತ್ತೆ ಎಂದು ನೀವು ಭಾವಿಸಿದ್ದೀರಾ? ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು. ಬಾಲರಾಜ್ ನ್ಯಾಯಾಲಯಕ್ಕೆ ಕ್ಷಮೆ ಕೋರಿದರು.
ನಂತರ ಲೆನಿನ್ ಪರ ವಕೀಲರು, ಆರೋಪಿ ನಿತ್ಯಾನಂದ ಸ್ವಾಮೀಜಿ ಕೊನೆಯ ಬಾರಿಗೆ ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದು, 2018ರ ಜೂನ್ 5ರಂದು. ಆ ನಂತರ ಹಾಜರಾಗಿಲ್ಲ. ಸತತ ಗೈರಾಗಿರುವ ಹಿನ್ನೆಲೆ ಜಾಮೀನು ರದ್ದು ಪಡಿಸಬೇಕು ಎಂದು ಕೋರಿದರು. ಹೆಚ್ಚುವರಿ ಸರ್ಕಾರಿ ಅಭಿಯೋಜಕರು, ವಿಚಾರಣೆಗೆ ನಿತ್ಯಾನಂದ ಸ್ವಾಮೀಜಿ ಹಾಜರಾತಿ ಅಗತ್ಯವಿಲ್ಲ. ಅವರಿಗೆ ಸಮನ್ಸ್ ಜಾರಿಯಾದ ನಂತರ ವಿಚಾರಣೆ ನಡೆಸುವುದು ಸೂಕ್ತ ಎಂದು ತಿಳಿಸಿದರು.