Advertisement

“Nitte ಸಂಸ್ಥೆಗಳಿಂದ ದೇಶ ಕಟ್ಟುವ ಕಾಯಕ’: ಯು.ಟಿ. ಖಾದರ್‌

10:59 PM Jun 10, 2024 | Team Udayavani |

ಉಳ್ಳಾಲ: ನಿಟ್ಟೆ ವಿಶ್ವವಿದ್ಯಾನಿಲಯದಂತಹ ಅತ್ಯುನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ದೇಶದ ವಿದ್ಯಾರ್ಥಿಗಳು ಮಾತ್ರವಲ್ಲದೆ ವಿದೇಶದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಉನ್ನತ ಶಿಕ್ಷಣ ಕಲ್ಪಿಸಿರುವ ನಿಟ್ಟೆ ವಿ.ವಿ.ಯ ಸ್ಥಾಪಕ ಎನ್‌. ವಿನಯ ಹೆಗ್ಡೆ ನಿಜವಾದ ದೇಶ ಕಟ್ಟುವ ಕಾರ್ಯ ನಡೆಸುತ್ತಿದ್ದಾರೆ. ಅವರ ಶೈಕ್ಷಣಿಕ ದೂರದರ್ಶಿತ್ವ ಎಲ್ಲರಿಗೂ ಮಾದರಿ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್‌ ಶಾಸಕ ಯು.ಟಿ. ಖಾದರ್‌ ಹೇಳಿದರು.

Advertisement

ಅವರು ಸೋಮವಾರ ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜಿನ ಬೆಳ್ಳಿಹಬ್ಬದ ಅಂಗವಾಗಿ ಜಸ್ಟಿಸ್‌ ಕೆ.ಎಸ್‌. ಹೆಗ್ಡೆ ಚಾರಿಟೆಬಲ್‌ ಆಸ್ಪತ್ರೆ(ಕ್ಷೇಮ)ಯಲ್ಲಿ ಹಲವು ಸೌಲಭ್ಯಗಳನ್ನೊಳಗೊಂಡ ನೂತನ ಕಟ್ಟಡ ಹಾಗೂ ಅತ್ಯಾಧುನಿಕ ಅಣು ಔಷಧ ಸೌಲಭ್ಯ (ಸುಧಾರಿತ ಪಿಇಟಿ / ಸಿಟಿ ಸ್ಕ್ಯಾನ್‌ ಇತ್ಯಾದಿ) ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯ)ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಈ ದೇಶ ಬಲಿಷ್ಠವಾಗಲು ಶಿಕ್ಷಣದಿಂದ ಮಾತ್ರ ಸಾಧ್ಯ. ಅಂತಹ ಗುಣಮಟ್ಟದ ಶಿಕ್ಷಣದ ಮೂಲಕ ನಿಟ್ಟೆ ಶಿಕ್ಷಣ ಸಂಸ್ಥೆ ಲಕ್ಷಾಂತರ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳನ್ನು ರಾಷ್ಟ್ರ ಕಟ್ಟುವ ಕಾಯಕಕ್ಕೆ ನೀಡುತ್ತಿದೆ ಎಂದರು.

ಕೋಟ್ಯಂತರ ರೂ.
ಚಿಕಿತ್ಸೆ ಉಚಿತ
ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿ.ವಿ. ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯರಿಗೆ ವಾರ್ಷಿಕವಾಗಿ ಕೋಟ್ಯಂತರ ರೂ. ಮೌಲ್ಯದ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದು ಶೈಕ್ಷಣಿಕವಾಗಿ ನಿಟ್ಟೆ ಸಂಸ್ಥೆ ಶುಲ್ಕದಲ್ಲಿಯೂ ರಿಯಾಯಿತಿ ಕೊಡುತ್ತಾ ಬಂದಿದೆ. ಶುಲ್ಕ ರಿಯಾಯಿತಿ, ಉಚಿತ ಸೇವೆ ಬಗ್ಗೆ ನಮಗೆ ಸಂತೃಪ್ತಿ ಇದೆ ಎಂದರು.

ನಿಟ್ಟೆ ವಿ.ವಿ.ಯ ಆಡಳಿತ ಸಹ ಕುಲಾಧಿಪತಿ ವಿಶಾಲ್‌ ಹೆಗ್ಡೆ, ಕುಲಸಚಿವ ಹರ್ಷ ಹಾಲಹಳ್ಳಿ, ಡೀನ್‌ ಡಾ| ಜಯಪ್ರಕಾಶ್‌ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ| ಸುಮಲತಾ ಆರ್‌. ಉಪಸ್ಥಿತರಿದ್ದರು.

Advertisement

ನಿಟ್ಟೆ ವಿ.ವಿ. ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಸ್ವಾಗತಿಸಿ, ಕುಲಪತಿ ಪ್ರೊ| ಡಾ| ಎಂ.ಎಸ್‌. ಮೂಡಿತ್ತಾಯ ವಂದಿಸಿದರು. ನ್ಯೂರೋಲಜಿ ಪ್ರೊಫೆಸರ್‌ ಡಾ| ಸುಹಾನ್‌ ಆಳ್ವ ಕಾರ್ಯಕ್ರಮ ನಿರೂಪಿಸಿದರು.

ಬಿಪಿ, ಶುಗರ್‌ ಔಷಧ ಮನೆಬಾಗಿಲಿಗೆ: ದಿನೇಶ್‌
ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಲ್ಲಿ ಮೊದಲ ಆಯ್ಕೆಯಾಗಿ ಪರಿಗಣಿಸುವ ಶಿಕ್ಷಣ ಸಂಸ್ಥೆಗಳಲ್ಲಿ ನಿಟ್ಟೆ ಪರಿಗಣಿತ ವಿ.ವಿ.ಯೂ ಒಂದಾಗಿದ್ದು ಈ ಭಾಗ ಉನ್ನತ ಶೈಕ್ಷಣಿಕ ಹಬ್‌ ಆಗಿದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳದ್ದೂ ದೊಡ್ಡ ಪಾತ್ರವಿದೆ ಎಂದರು. ರಕ್ತದೊತ್ತಡ, ಮಧುಮೇಹ ರೋಗಿಗಳ ಮನೆ ಬಾಗಿಲಿಗೆ ಔಷಧ ಒದಗಿಸುವ ಯೋಜನೆಯನ್ನು ಸರಕಾರ ಹಾಕಿಕೊಂಡಿದೆ ಎಂದು ಇದೇ ವೇಳೆ ತಿಳಿಸಿದರು.

ಸೌಲಭ್ಯ, ಸಾಮರ್ಥ್ಯ ಹೆಚ್ಚಳ
ನೂತನ ಕಟ್ಟಡದಲ್ಲಿ ಸುಧಾರಿತ ಪರೀûಾ ಕ್ರಮ ಹಾಗೂ ಚಿಕಿತ್ಸೆಗಾಗಿ ಪಿಇಟಿ / ಸಿಟಿ ಸ್ಕ್ಯಾನಿಂಗ್‌ ಮತ್ತು ಗಾಮಾ ನೈಫ್‌ ಹೊಸದಾಗಿ ಪರಿಚಯಿಸ ಲಾಗಿದೆ. ತೀವ್ರನಿಗಾ ಘಟಕ, ಶಸ್ತ್ರಚಿಕಿತ್ಸಾ ಘಟಕಗಳು, ಹೃದಯ ರೋಗಗಳು, ಕ್ಯಾನ್ಸರ್‌, ಜೀರ್ಣಾಂಗ ಸಮಸ್ಯೆಗಳು, ನರಶಸ್ತ್ರಚಿಕಿತ್ಸೆ, ಮಕ್ಕಳ ಆರೋಗ್ಯ, ಪ್ರಸೂತಿ ಹಾಗೂ ಬಾಣಂತಿ ಆರೈಕೆ ವಿಭಾಗಗಳಿಗೆ ಸ್ಥಳಾವಕಾಶ ಕಲ್ಪಿಸಿಕೊಡಲಾಗಿದೆ. ಹೊರರೋಗಿ ಘಟಕ ಹಾಗೂ ವಾರ್ಡ್‌ ಗಳಿಗೆ ಹೆಚ್ಚಿನ ಸ್ಥಳಾವಕಾಶವನ್ನೂ ಈ ಹೊಸ ಕಟ್ಟಡ ನೀಡಲಿದೆ. ಆಸ್ಪತ್ರೆಗೆ 1,200 ಹಾಸಿಗೆಗಳ ಸಾಮರ್ಥ್ಯ ಲಭಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next