ಕನ್ನಡ ಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ನಿರ್ದೇಶಕಿಯರು ಕಾಣಸಿಗುತ್ತಿದ್ದರು. ಈಗ ಕಾಲ ಬದಲಾಗಿದ್ದು ಬೆಳವಣಿಗೆಯಲ್ಲಿರುವ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಹೆಚ್ಚುತ್ತಿದೆ. ಸಾಕಷ್ಟು ಜನ ಮಹಿಳೆಯರು ನಿರ್ದೇಶನದತ್ತ ಒಲವವನ್ನು ತೋರುತ್ತಿದ್ದಾರೆ. ಈ ಸಾಲಿಗೆ ನೂತನ ನಿರ್ದೇಶಕಿ ರಮ್ಯ ಶ್ರೀನಿವಾಸ್
ಒಬ್ಬರಾಗಿದ್ದು “ನಿರ್ಮುಕ್ತ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಡಾ.ರೂಪಸ್ವಾಮಿ ಅವರೊಡಗೂಡಿ ನಿರ್ಮಾಣವನ್ನು ಮಾಡಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಸಮಾರಂಭ ನೆರವೇರಿತು. ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ಈ ಚಿತ್ರದಲ್ಲಿ ಅಂಬರೀಶ್ ಅವರ ತಂಗಿ ರಂಜನಿ ಅವರ ಪುತ್ರ ಅಭಿಷೇಕ್ ಸಿ ಕೆ ನಾಯಾಕನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ನವ್ಯ ಪೂಜಾರಿ ನಾಯಕಿಯಾಗಿ ಅಭಿನಯಿಸಿದ್ದಾರೆ.
“ಇದು ನಮ್ಮ ಕುಟುಂಬದ ಸಮಾರಂಭ. ಏನು ಮಾತನಾಡಬೇಕೊ ತಿಳಿಯುತ್ತಿಲ್ಲ. ಅಂಬರೀಶ್ ಅವರ ತಾತ ಚೌಡಯ್ಯ ಅವರು ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದವರು. ನಂತರ ಅಂಬರೀಶ್ ಸಿನಿಮಾದಲ್ಲಿ ಹೆಸರು ಮಾಡಿದರು. ಆನಂತರ ನಮ್ಮ ಅಭಿಷೇಕ್. ಈಗ ಈ ಅಭಿಷೇಕ್ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಸಂತೋಷವಾಗುತ್ತಿದೆ. ಅಭಿಷೇಕ್ ಸಿ.ಕೆ ಸಹ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಲಿ’ ಎಂದರು ಸುಮಲತಾ ಅಂಬರೀಶ್. ಟೀಸರ್ ಬಿಡುಗಡೆಗೊಳಿಸಿದ ಅಭಿಷೇಕ್ ಅಂಬರೀಶ್ ತಮ್ಮ ಸಹೋದರನಿಗೆ ಶುಭ ಹಾರೈಸಿದರು.
ಇದನ್ನೂ ಓದಿ:ಕೆಜಿಎಫ್ ಚಾಪ್ಟರ್ 2 ದಾಖಲೆ: ಅತೀ ಹೆಚ್ಚು ಗಳಿಕೆ ಕಂಡ ಭಾರತದ ಟಾಪ್ 10 ಸಿನಿಮಾ ಇವು…
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, “ಬೇರೆ ಕ್ಷೇತ್ರಗಳಿಂದ ಬಂದು ಚಿತ್ರರಂಗದಲ್ಲಿ ಒಂದು ಹೊಸ ಪ್ರಯೋಗಕ್ಕೆ ತಯಾರಾಗಿರುವ ನಿರ್ಮಾಪಕರು ಹಾಗೂ ನಿರ್ದೇಶಕರಿಗೂ ಚಿತ್ರ ಯಶಸ್ಸು ನೀಡಲಿ’ಎಂದು ಶುಭ ಹಾರೈಸಿದರು. ಮೂಲತಃ ವೈದ್ಯರಾಗಿರುವ ಡಾ.ರೂಪಸ್ವಾಮಿ ನಿರ್ಮಾಣದ ಬಗ್ಗೆ ಮಾತನಾಡುತ್ತಾ, ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು.
ಇದೊಂದು ಮೆಡಿಕಲ್ ಕಾಲೇಜ್‌ನಲ್ಲಿ ನಡೆಯುವ ಒಂದು ಪ್ರೇಮ ಕಥೆಯಾಗಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿದೆ. 2 ಪ್ರೇಮಿಗಳ ಜೀವನದಲ್ಲಿ ಆಗುವ ಟ್ವಿಸ್ಟ್ ಮತ್ತು ಟರ್ನ್ಗಳು ಏನು? ಹೇಗೆ ಕಷ್ಟಗಳನ್ನು ಎದುರಿಸುತ್ತಾರೆ ಎಂದು ಹೇಳುವ ಕಥೆಯೇ ನಿರ್ಮುಕ್ತ ಎಂದರು ನಿರ್ದೇಶಕಿ ರಮ್ಯ ಶ್ರಿನಿವಾಸ್.
ಚಿತ್ರದಲ್ಲಿ 9 ಹಾಡುಗಳಿದ್ದು , ವಿಜಯ್ ಪ್ರಕಾಶ್, ವಿನಯ್ ಕೆ, ಸಚಿನ್, ವಿನಯ್ ಸಿ ಎಂ, ಅನುರಾಧ ಭಟ್, ಸಿದ್ದಾರ್ಥ್, ಅದಿತಿ ಖಂಡೆಗಾಲ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.