Advertisement
ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 70 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದ್ದು, ಇದರಿಂದ ಹೊಸ ಸಾಲ ಸೃಷ್ಟಿಯಾಗಲು ಅವಕಾಶ ಹೆಚ್ಚಲಿದೆ. ಈ ಮೂಲಕ ಆಟೋ, ರಿಯಾಲ್ಟಿ ಮತ್ತಿತರ ರಿಟೇಲ್ ವಲಯದ ಸಾಲದ ಬೇಡಿಕೆ ಪ್ರಮಾಣ ಕುಗ್ಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Related Articles
Advertisement
ಅಲ್ಲದೆ, ಆರ್‌ಬಿಐ ಇಳಿಕೆ ಮಾಡಿರುವ ರೆಪೋ ದರದ ಸೌಲಭ್ಯವನ್ನು ಗ್ರಾಹಕರಿಗೆ ವರ್ಗಾಯಿಸಲು ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದ್ದು, ಅವು ಒಪ್ಪಿವೆ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹೀಗಾಗಿ ರೆಪೋ ದರಕ್ಕೆ ಹೊಂದಿಕೊಂಡಿರುವ ಗೃಹ ಮತ್ತು ವಾಹನ ಮೇಲಿನ ಸಾಲದ ಬಡ್ಡಿದರವು ಕಡಿಮೆಯಾಗುವುದರಿಂದ ಇಎಂಐ ಕೂಡ ಕಡಿಮೆಯಾಗಲಿದೆ ಎಂದಿದ್ದಾರೆ. ಸಾಲ ಮುಗಿದ 15 ದಿನಗಳಲ್ಲಿ ಬ್ಯಾಂಕ್‌ನಿಂದ ದಾಖಲೆ ವಾಪಸ್ ನೀಡಲಾಗುವುದು ಮತ್ತು ಸಾಲ ಅರ್ಜಿಗಳ ಆನ್‌ಲೈನ್ ಟ್ರ್ಯಾಕಿಂಗ್ ಸೌಲಭ್ಯವನ್ನೂ ಕಲ್ಪಿಸಲು ನಿರ್ಧಾರ ಮಾಡಲಾಗಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.
ಸಿರಿವಂತರ ಮೇಲಿನ ತೆರಿಗೆ ರದ್ದು: ಜೆಟ್‌ನಲ್ಲಿ ಶ್ರೀಮಂತರಿಗೆ ಹೆಚ್ಚುವರಿ ತೆರಿಗೆ ವಿಧಿಸಿದ್ದರಿಂದಾಗಿ, 2 ಕೋಟಿ ರೂ.ಗಳಿಂದ 5 ಕೋಟಿ ರೂ. ಆದಾಯ ಹೊಂದಿರುವವರ ಮೇಲೆ ಶೇ.35.88 ರಿಂದ ಶೇ.39ರಷ್ಟು ಹಾಗೂ 5 ಕೋಟಿ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಶೇ. 42.7 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಈಗ ಬಜೆಟ್‌ಗೂ ಮೊದಲಿದ್ದ ಬಡ್ಡಿ ದರವೇ ಮರುಜಾರಿಯಾಗಲಿದೆ ಎಂದು ನಿರ್ಮಲಾ ಹೇಳಿದ್ದಾರೆ. ಅಲ್ಲದೆ, ಸ್ಟಾರ್ಟಪ್‌ಗ್ಳಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರ ಸಂಕಷ್ಟ ನಿವಾರಣೆಗೆ ಏಂಜೆಲ್ ತೆರಿಗೆಯನ್ನೂ ಹಿಂಪಡೆಯಲಾಗಿದೆ.
ನೋಟಿಸ್‌ಗಳ ತೊಂದರೆ ಕಡಿಮೆ: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ ಉಲ್ಲಂಘನೆಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸದಿರಲು ನಿರ್ಧಾರ ಮಾಡಲಾಗಿದೆ. ಅ.1 ರಿಂದ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಎಲ್ಲ ಐಟಿ ನೋಟಿಸ್ ಜಾರಿಯಾಗಲಿದೆ. ಅಲ್ಲದೆ, ನವೋದ್ಯಮಗಳಿಗೆ ಏಂಜೆಲ್ ಟ್ಯಾಕ್ಸ್‌ನಿಂದ ಮುಕ್ತಿ, ತೆರಿಗೆ ಸಮಸ್ಯೆ ಪರಿಹಾರಕ್ಕೆ ಪ್ರತ್ಯೇಕ ವಿಭಾಗ ಸೃಷ್ಟಿಸಲು ನಿರ್ಧಾರ ಮಾಡಲಾಗಿದೆ. ಸಣ್ಣ ಉದ್ಯಮಗಳ ಸಾಲದ ಒಂದು ಬಾರಿಯ ಸೆಟಲ್‌ಮೆಂಟ್‌ಗೆ ಪಾರದರ್ಶಕ ವ್ಯವಸ್ಥೆ ಮಾಡಿಕೊಡಲಾಗಿದೆ.
30 ದಿನದಲ್ಲಿ ಜಿಎಸ್‌ಟಿ ರಿಫಂಡ್: ಎಂಎಸ್‌ಎಂಇಗಳಿಗೆ ಇದುವರೆಗೆ ಬಾಕಿ ಉಳಿಸಿಕೊಂಡಿರುವ ಜಿಎಸ್‌ಟಿ ರಿಫಂಡ್ ಅನ್ನು ಇನ್ನು 30 ದಿನಗಳೊಳಗೆ ನೀಡಲಾಗುವುದು. ಹೊಸದಾಗಿ ಬರುವ ರಿಟರ್ನ್ಸ್ ಗೆ 60 ದಿನದಲ್ಲಿ ರಿಫಂಡ್ ಮಾಡಿಸುವ ವ್ಯವಸ್ಥೆ ಮಾಡಲು ಜಿಎಸ್‌ಟಿ ವ್ಯವಸ್ಥೆಯನ್ನೇ ಸರಳೀಕರಣ ಮಾಡಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ.