Advertisement
ನಾವು ನವಭಾರತದತ್ತ ಹೆಜ್ಜೆಯಿಡುತ್ತಿದ್ದೇವೆ ಎನ್ನುವುದಕ್ಕೆ ಈ ಬಜೆಟ್ ಸಾಕ್ಷಿ ಎಂದಿರುವ ಪ್ರಧಾನಿ ಮೋದಿ, ಇದು ಬಡವರನ್ನು ಬಲಿಷ್ಠಗೊಳಿಸುವುದರ ಜೊತೆಗೆ, ದೇಶದ ಯುವಜನತೆಗೆ ಉತ್ತಮ ನಾಳೆಗಳನ್ನು ಒದಗಿಸಿಕೊಟ್ಟಿದೆ ಎಂದಿದ್ದಾರೆ.
Related Articles
Advertisement
ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಲಾಗಿದೆ. ಒಟ್ಟಿನಲ್ಲಿ ಬಡವರು, ರೈತರು, ದಲಿತರು, ತುಳಿತಕ್ಕೊಳಗಾದವರು ಮತ್ತು ಸಮಾಜದ ಅವಕಾಶ ವಂಚಿತ ವರ್ಗದ ಸಬಲೀಕರಣಕ್ಕೆ ಈ ಬಜೆಟ್ ಮುನ್ನುಡಿ ಬರೆದಿದೆ.
ಇವರೆಲ್ಲರ ಸಬಲೀಕರಣದಿಂದಾಗಿ ಮುಂದಿನ 5 ವರ್ಷಗಳಲ್ಲಿ ಇವರು ದೇಶದ “ಶಕ್ತಿಕೇಂದ್ರ’ವಾಗಿ ಬದಲಾಗುತ್ತಾರೆ. ಸಬಲೀಕರಣಗೊಂಡ ಈ ವರ್ಗಗಳಿಂದಲೇ ದೇಶವು 5 ಲಕ್ಷ ಕೋಟಿ ಡಾಲರ್‌ನ ಆರ್ಥಿಕತೆಯಾಗುವ ಕನಸು ಈಡೇರಲಿದೆ ಎಂಬ ವಿಶ್ವಾಸವನ್ನೂ ಮೋದಿ ವ್ಯಕ್ತಪಡಿಸಿದ್ದಾರೆ.
ಹಳೆಯ ಭರವಸೆಗಳ ಪುನರುಚ್ಚಾರ: ಈ ಬಜೆಟ್ ಹಳೆಯ ಭರವಸೆಗಳ ಪುನರುಚ್ಚಾರ ಅಷ್ಟೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಯಾವುದೇ ಹೊಸ ಯೋಜನೆಯನ್ನು ಘೋಷಿಸಿಲ್ಲ. ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ. ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಿಗೆ ನಿರ್ದಿಷ್ಟ ಎಂಬಂಥ ಯೋಜನೆಯನ್ನೇ ಹಾಕಿಲ್ಲ ಎಂದು ಚೌಧರಿ ಹೇಳಿದ್ದಾರೆ.
ಬಜೆಟ್ ಹತ್ತು ವರ್ಷಗಳ ಧ್ಯೇಯ: ನಮ್ಮ ಸರ್ಕಾರವು ಹತ್ತು ವರ್ಷಗಳ ಧ್ಯೇಯವನ್ನಿಟ್ಟುಕೊಂಡು ಈ ಬಜೆಟ್ ಮಂಡಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಜೆಟ್ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.
ದೇಶವನ್ನು 5 ಲಕ್ಷಕೋಟಿ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ರಚನಾತ್ಮಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಿದೆ ಎಂದಿದ್ದಾರೆ. ಆ ನಿಟ್ಟಿನಲ್ಲಿ ಮೂಲಸೌಕರ್ಯ, ಡಿಜಿಟಲ್ ಆರ್ಥಿಕತೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ದಿಮೆ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯತ್ತ ಗಮನ ಕೇಂದ್ರೀಕರಿಸಲಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.
ಹೊಸ ಬಾಟಲಿಯಲ್ಲಿ ಹಳೇ ಮದ್ಯ ಕಾಂಗ್ರೆಸ್: ಕೇಂದ್ರ ಬಜೆಟ್ ಅನ್ನು ಪ್ರತಿಪಕ್ಷ ಕಾಂಗ್ರೆಸ್ ಅತ್ಯಂತ ನೀರಸ ಎಂದು ಬಣ್ಣಿಸಿದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾಜದ ಯಾವ ವಲಯಕ್ಕೂ ಅರ್ಥಪೂರ್ಣ ರಿಲೀಫ್ ಕೊಡದೇ ಇರುವ ಮೂಲಕ ನಿರೀಕ್ಷೆಗಳನ್ನು ಹುಸಿಯಾಗಿಸಿ ದ್ದಾರೆ. ಹೀಗಾಗಿ ಈ ಬಜೆಟ್ “ಹೊಸ ಬಾಟಲಿ ಯಲ್ಲಿ ಹಳೇ ಮದ್ಯ’ ನೀಡಿದಂತಾಗಿದೆ ಎಂದು ಹೇಳಿದೆ.
ಅತ್ತ ಜನಸಾಮಾನ್ಯರ ಧ್ವನಿಯನ್ನೂ ಆಲಿಸಿಲ್ಲ, ಇತ್ತ ತಿಳಿವಳಿಕೆಯುಳ್ಳ ಅರ್ಥಶಾಸ್ತ್ರಜ್ಞರ ಸಲಹೆಯನ್ನೂ ಪಡೆದುಕೊಂಡಿಲ್ಲ ಎನ್ನುವುದು ಈ ಮುಂಗಡಪತ್ರವನ್ನು ನೋಡಿದರೆ ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಮೋದಿ ಸರ್ಕಾರವು ಭಾರತವನ್ನು ಒಂದು ದೊಡ್ಡ ರಾಜ್ಯ ಸರ್ಕಾರ ಎಂದು ಭಾವಿಸಿದೆ. ರಾಜ್ಯ ಸರ್ಕಾರಗಳು ಮಾಡಬೇಕಾದ್ದನ್ನು ತಾನು ಮಾಡುತ್ತಿದೆ. ಇದು ಒಕ್ಕೂಟ ವ್ಯವಸ್ಥೆಯಾಗುವುದಿಲ್ಲ, ಬದಲಿಗೆ ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರವು ಹೇರಿದ ಅಸಮಾನತೆಯ ಪಾಲುದಾರಿಕೆಯಾಗಿದೆ ಎಂದೂ ಚಿದಂಬರಂ ಕಿಡಿಕಾರಿದ್ದಾರೆ.
ಐಪ್ಯಾಡ್ ತರ್ತಾರೆ!: ವಿತ್ತ ಸಚಿವೆ ನಿರ್ಮಲಾ ಅವರು ಬ್ರಿಫ್ಕೇಸ್‌ನಲ್ಲಿ ಬಜೆಟ್ ದಾಖಲೆಗಳನ್ನು ತರುವ ಸಂಪ್ರದಾಯ ವನ್ನು ಮುರಿದು ಕೆಂಪು ಬಣ್ಣದ ಬಟ್ಟೆಯಲ್ಲಿ ಬಜೆಟ್ ಕಡತಗಳನ್ನು ಸುತ್ತಿಕೊಂಡು ಬಂದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಚಿದಂಬರಂ, “ಭವಿಷ್ಯದಲ್ಲಿ ನಮ್ಮ ಕಾಂಗ್ರೆಸ್‌ನ ವಿತ್ತ ಸಚಿವರು ಐಪ್ಯಾಡ್ ತಂದು ಅದರ ಮೂಲಕವೇ ಬಜೆಟ್ ಓದುತ್ತಾರೆ’ ಎಂದು ಹೇಳಿದ್ದಾರೆ.