Advertisement

ಉಡುಪಿಗೆ ನಿರ್ಮಲಾ ಸೀತಾರಾಮನ್‌ ಆಗಮನ; ಕೇಂದ್ರ ವಿತ್ತ ಸಚಿವರ ತ್ರಿದಿನ ರಾಜ್ಯ ಪ್ರವಾಸ ಆರಂಭ

02:22 AM May 14, 2022 | Team Udayavani |

ಮಣಿಪಾಲ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೂರು ದಿನಗಳ ರಾಜ್ಯ ಪ್ರವಾಸ ನಿಮಿತ್ತ ಶುಕ್ರವಾರ ರಾತ್ರಿ ಉಡುಪಿ-ಮಣಿಪಾಲಕ್ಕೆ ಆಗಮಿಸಿದ್ದಾರೆ.

Advertisement

ಅವರು ಶನಿವಾರ ಉಡುಪಿಯಲ್ಲಿ ಮಣಿಪಾಲದ ಟಿ.ಎ. ಪೈ ಮ್ಯಾನೇಜೆ¾ಂಟ್‌ ಇನ್‌ಸ್ಟಿಟ್ಯೂಟ್‌ (ಟ್ಯಾಪ್ಮಿ)ನಲ್ಲಿ ಘಟಿಕೋತ್ಸವ ಭಾಷಣ ಮಾಡಲಿ ದ್ದಾರೆ. ಇದಕ್ಕೆ ಮುನ್ನ ಕುಕ್ಕಿಕಟ್ಟೆಯಲ್ಲಿ ಶ್ರೀವಿಶ್ವೇಶ ತೀರ್ಥ ಧಾಮವನ್ನು ಉದ್ಘಾಟಿಸಲಿರುವರು. ವಿತ್ತ ಸಚಿವೆ ಯಾದ ಬಳಿಕ ಇದು ನಿರ್ಮಲಾ ಅವರ ಪ್ರಥಮ ಉಡುಪಿ-ಮಣಿಪಾಲ ಭೇಟಿ.

ಅವರು ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದಾಗ 2013ರಲ್ಲಿ ಟಿ.ಎ. ಪೈ ಸ್ಮಾರಕ ಸರಣಿ ಉಪನ್ಯಾಸ ಮಾಲಿಕೆಯಲ್ಲಿ “ಡಸ್‌ ಇಂಡಿಯಾ ನೀಡ್‌ ಗುಡ್‌ ಪೊಲಿಟೀಶಿಯನ್ಸ್‌ ಓರ್‌ ಗುಡ್‌ ಪೊಲಿಟಿಕಲ್‌ ಪಾರ್ಟೀಸ್‌’ ಕುರಿತು ಉಪನ್ಯಾಸ ನೀಡಿದ್ದರು. ಈಗ ಪ್ರಧಾನಿ ಮೋದಿ ಸಂಪುಟದ ಪ್ರಭಾವಿ ಸಚಿವೆಯಾಗಿ ಅವರು ಭಾಗವಹಿಸುತ್ತಿರುವುದು ಕಾಕತಾಳೀಯವೆನಿಸಿದೆ.

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಇವರ ರಾಜ್ಯ ಸಭಾ ಸದಸ್ಯತ್ವ ಅವಧಿ ಮುಗಿಯುತ್ತಿದ್ದು, ಮತ್ತೂಮ್ಮೆ ಆಯ್ಕೆಯಾಗುವುದು ಬಹುತೇಕ ಖಚಿತ. ಈ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ರಾಜಕೀಯ ಮಹತ್ವ ಇದೆ.

ನಿರ್ಮಲಾ ಅವರ ಸಂಪರ್ಕ ಉಡುಪಿಗೆ, ವಿಶೇಷವಾಗಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರಿಗೆ ಹಿಂದಿನಿಂದಲೂ ಇತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಶ್ರೀಪಾದರು ಐದನೆಯ ಬಾರಿಗೆ ಪರ್ಯಾಯ ಪೀಠವನ್ನು ಅಲಂಕರಿಸಿದಾಗ ಆಗಮಿಸಿದ್ದರು. ಆಗ ಅವರು ವಾಣಿಜ್ಯ ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವೆಯಾಗಿದ್ದರು. ಮೇ 14ರಂದು ಅವರು ಉದ್ಘಾಟಿಸಲಿರುವ  ಶ್ರೀವಿಶ್ವೇಶತೀರ್ಥ ಧಾಮವು ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿರ್ಮಾಣಗೊಂಡಿದೆ.

Advertisement

ಪ್ರಸ್ತುತ ಜಿಎಸ್‌ಟಿ ದರ ಏರಿಕೆ, ಇತ್ತೀಚೆಗೆ ಆರ್‌ಬಿಐ ಸಾಲದ ಬಡ್ಡಿದರವನ್ನು ಏರಿಸಿರುವುದು,  ಶ್ರೀಲಂಕಾ, ನೇಪಾಲದಲ್ಲಿ ಹದಗೆಟ್ಟ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿ, ಪಾಕಿಸ್ಥಾನದ ನಿರಂತರ ಕಿರಿಕಿರಿ, ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಇತ್ಯಾದಿ ವಿಷಯಗಳ ಕುರಿತು ಕೇಂದ್ರ ಸರಕಾರ ತಳೆಯುವ ನಿರ್ಧಾರಗಳ ಹಿಂದೆ ವಿತ್ತ ಸಚಿವರ ಪ್ರಧಾನ ಪಾತ್ರವಿದೆ. ಕೋವಿಡ್‌ನ‌ಂತಹ ಸಂದರ್ಭದಲ್ಲಿ ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆಯೂ ಇವರಿಗಿದೆ.

ಉಡುಪಿ ಪ್ರವಾಸ ವಿವರ

– ಶನಿವಾರ ಬೆಳಗ್ಗೆ 6ಕ್ಕೆ ಶ್ರೀಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ, ಪೂಜೆ. ಈ ಹಿಂದೆ ಉಡುಪಿಗೆ ಬಂದಿದ್ದಾಗಲೂ ಮುಂಜಾವದ ವಿಶ್ವರೂಪ ದರ್ಶನ ಪೂಜೆಯಲ್ಲಿ ಪಾಲ್ಗೊಂಡಿದ್ದರು.

-ಬೆಳಗ್ಗೆ 9.20ಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ಪೂಜೆ.

-ಅಪರಾಹ್ನ 2.30ಕ್ಕೆ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ಶ್ರೀವಿಶ್ವೇಶ ತೀರ್ಥ ಸೇವಾ ಧಾಮ ಉದ್ಘಾಟನೆ.

-ಸಂಜೆ 4ಕ್ಕೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಟ್ಯಾಪ್ಮಿ ಘಟಿಕೋತ್ಸವದಲ್ಲಿ  ಭಾಗಿ.

Advertisement

Udayavani is now on Telegram. Click here to join our channel and stay updated with the latest news.

Next