Advertisement

ನಿರ್ಮಲಾರತ್ತ ಮಧ್ಯಮ ವರ್ಗದ ನಿರೀಕ್ಷೆಯ ನೋಟ

12:58 AM Feb 01, 2023 | Team Udayavani |

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2023-24ನೇ ಸಾಲಿನ ಕೇಂದ್ರ ಮುಂಗಡಪತ್ರವನ್ನು ಇಂದು (ಬುಧವಾರ) ಮಂಡಿಸಲಿದ್ದಾರೆ. ಈ ಬಜೆಟ್‌ನ ಬಗೆಗೆ ದೇಶದ ಜನತೆ ಅದರಲ್ಲೂ ಮಧ್ಯಮ ವರ್ಗದ ಜನರು ಭಾರೀ ನಿರೀಕ್ಷೆಯನ್ನಿರಿಸಿಕೊಂಡಿದ್ದಾರೆ. ಈ ಬಾರಿಯ ಆಯವ್ಯಯ ಸಚಿವರ ಪಾಲಿಗೆ ಒಂದರ್ಥದಲ್ಲಿ ಹಗ್ಗದ ಮೇಲಣ ನಡಿಗೆಯೇ ಸರಿ. ಜಾಗತಿಕ ಆರ್ಥಿಕ ಪರಿಸ್ಥಿತಿ ಯನ್ನು ಅವಲೋಕಿಸಿದಾಗ ದೇಶದ ಆರ್ಥಿಕತೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ ಯಷ್ಟೇ ಅಲ್ಲದೆ ಮುಂಚೂಣಿಯಲ್ಲಿದೆ. ಆದರೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿ ರುವ ಕ್ಷಿಪ್ರ ಬೆಳವಣಿಗೆಗಳ ಪರೋಕ್ಷ ಪರಿಣಾಮ ಭಾರತದ ಮೇಲೆ ಬೀಳುತ್ತಿರುವು ದರಿಂದಾಗಿ ಎಚ್ಚರಿಕೆಯ ಹೆಜ್ಜೆಯನ್ನಿಡುವುದು ಅನಿವಾರ್ಯವಾಗಿದೆ. ಈ ನಡುವೆ ಪ್ರಸಕ್ತ ವರ್ಷ ದೇಶದ 9 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದ್ದರೆ ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜನಪ್ರಿಯತೆಯಿಂದ ದೂರಸರಿಯದೆ ಸಮತೋಲನದ ಬಜೆಟ್‌ ಮಂಡನೆಯ ಗುರುತರ ಸವಾಲು ಸಚಿವೆ ನಿರ್ಮಲಾರ ಹೆಗಲ ಮೇಲೇರಿದೆ.

Advertisement

ಕೊರೊನಾ ಬಳಿಕ ದೇಶದ ಮಧ್ಯಮ ವರ್ಗದ ಜನರ ಮೇಲೆ ಭಾರೀ ಹೊರೆ ಬಿದ್ದಿದೆ. ಆರೋಗ್ಯ ಸಮಸ್ಯೆ, ಆದಾಯ ಕೊರತೆ, ಉದ್ಯೋಗ ನಷ್ಟ, ಬೆಲೆ ಏರಿಕೆ ಇವೆಲ್ಲದರ ನೇರ ಪರಿಣಾಮ ಮಧ್ಯಮ ವರ್ಗದವರ ಮೇಲೆ ಬಿದ್ದಿದೆ. ಇನ್ನು ಭಾರ ತೀಯ ರಿಸರ್ವ್‌ ಬ್ಯಾಂಕ್‌ ಆರ್ಥಿಕ ಸಂಕಷ್ಟದಿಂದ ಪಾರಾಗಲು ಅನುಸರಿಸಿದ ಕಟ್ಟುನಿಟ್ಟಿನ ಕ್ರಮಗಳ ಪರೋಕ್ಷ ಪರಿಣಾಮವನ್ನೂ ಮಧ್ಯಮ ವರ್ಗದ ಜನರು ಎದುರಿಸುವಂತಾಗಿದೆ. ಜಾಗತಿಕ ಮಟ್ಟದಲ್ಲಿನ ಆರ್ಥಿಕ ಸ್ಥಿತಿಗತಿಗೆ ಹೋಲಿಸಿದರೆ ದೇಶದ ಆರ್ಥಿಕ ಬೆಳವಣಿಗೆ ಸಕಾರಾತ್ಮಕವಾಗಿರುವುದು, ದೇಶ ಪ್ರತಿಯೊಂದೂ ಕ್ಷೇತ್ರದಲ್ಲಿಯೂ ಸ್ವಾವಲಂಬನೆಯ ಹಾದಿ ಹಿಡಿದಿರುವುದು, ಮೂಲ ಸೌಕರ್ಯ ಗಳ ಅಭಿವೃದ್ಧಿ, ತೆರಿಗೆ ಸಂಗ್ರಹ… ಹೀಗೆ ಪ್ರತೀಯೊಂದರಲ್ಲೂ ಆಶಾದಾಯಕ ಬೆಳ ವಣಿಗೆಯನ್ನು ಕಂಡಿರುವ ಹೊರತಾಗಿಯೂ ಬಡ-ಮಧ್ಯಮ ವರ್ಗದ ಜನತೆಯ ಪರಿಸ್ಥಿತಿ ಮಾತ್ರ ನಾಲಗೆಯ ಮೇಲಿನ ಬಿಸಿತುಪ್ಪದಂತಾಗಿರುವುದು ಸುಳ್ಳಲ್ಲ.

ಮೂಲಸೌಕರ್ಯಗಳ ವೃದ್ಧಿಯಲ್ಲಿ ನಿರಂತರತೆ ಕಾಯ್ದುಕೊಳ್ಳುವ ಜತೆಯಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ, ಸಮಾಜದ ಪ್ರತೀಯೊಂದೂ ವರ್ಗದ ಆದಾಯ ಹೆಚ್ಚಳ, ಹಣದುಬ್ಬರ ನಿಯಂತ್ರಣ, ವಿತ್ತೀಯ ಕೊರತೆಯ ನಿಯಂತ್ರಣ, ನರೇಗಾದ ಕಾರ್ಯವ್ಯಾಪ್ತಿ ಹೆಚ್ಚಳ, ಕೈಗಾರಿಕೆಗಳು ಮತ್ತು ಕೃಷಿ ರಂಗಕ್ಕೆ ಮತ್ತಷ್ಟು ಉತ್ತೇಜನ ಇವೇ ಮೊದಲಾದ ಪ್ರೋತ್ಸಾಹಕ ಕ್ರಮಗಳು ಬಜೆಟ್‌ನಲ್ಲಿ ಘೋಷಣೆಯಾಗಲಿವೆ ಎಂಬ ವಿಶ್ವಾಸ ಈ ಕ್ಷೇತ್ರಗಳದ್ದಾಗಿದೆ.

ಇನ್ನು ಮಧ್ಯಮ ವರ್ಗದ ಜನರು ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ, ವಿವಿಧ ಖರ್ಚು ಮತ್ತು ಹೂಡಿಕೆಗಳ ಮೇಲೆ ಆದಾಯ ತೆರಿಗೆಯ 80 ಸಿ ಅಡಿಯಲ್ಲಿರುವ ವಿನಾಯಿತಿ ಮೊತ್ತದ ಏರಿಕೆ, 80 ಡಿಡಿ ಸೆಕ್ಷನ್‌ನಡಿಯಲ್ಲಿ ನೀಡಲಾಗುವ ವಿನಾಯಿತಿಗೆ ವೈದ್ಯರ ಭೇಟಿ ಮತ್ತು ಪ್ರಯೋಗ ಪರೀಕ್ಷೆ ಶುಲ್ಕಗಳ ಸೇರ್ಪಡೆ, ಗೃಹ ಸಾಲದ ಬಡ್ಡಿ ವಿನಾಯಿತಿ ಮೊತ್ತದಲ್ಲಿ ಏರಿಕೆ ಮತ್ತು ಸ್ಟಾಂಡರ್ಡ್‌ ಡಿಡಕ್ಷನ್‌ ಮಿತಿಯಲ್ಲಿ ಹೆಚ್ಚಳವಾದೀತು ಎಂಬ ನಿರೀಕ್ಷೆಯಲ್ಲಿದ್ದಾರೆ.

ಆಂತರಿಕ ಮತ್ತು ಜಾಗತಿಕ ಸವಾಲುಗಳ ನಡುವೆ ಜನಪ್ರಿಯತೆಗೂ ಮಣೆ ಹಾಕುವುದರ ಜತೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿರುವ ಮಧ್ಯಮ ವರ್ಗದ ರಕ್ಷಣೆಗೆ ಸರಕಾರ ಮುಂದಾಗಲೇಬೇಕು. ಈ ಅಗ್ನಿ ಪರೀಕ್ಷೆಯನ್ನು ಕೇಂದ್ರ ಸರಕಾರ ಎಷ್ಟು ಸಮರ್ಥವಾಗಿ ಎದುರಿಸಲಿದೆ ಎಂಬುದೇ ಸದ್ಯದ ಕುತೂಹಲ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next