Advertisement

ಶತಮಾನ ಕಂಡ ನರಿಮೊಗರು ಸರಕಾರಿ ಪ್ರಾಥಮಿಕ ಶಾಲೆ

09:55 AM Nov 10, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1919 ಶಾಲೆ ಆರಂಭ
ಪ್ರಸ್ತುತ 200 ವಿದ್ಯಾರ್ಥಿಗಳು

ನರಿಮೊಗರು: ಖಾಸಗಿ ಶಾಲೆಗಳ ಪೈಪೋಟಿ, ಸರಕಾರಿ ಶಾಲೆ ಕುರಿತಾಗಿ ಹೆತ್ತವರ ನಿರಾಸಕ್ತಿ ಇವೆರಡರ ನಡುವೆ ಗುಣಾತ್ಮಕ ಶಿಕ್ಷಣ ಮತ್ತು ಶಾಲಾ ಶಿಕ್ಷಣಕ್ಕೆ ಪ್ರೇರಣೆ ನೀಡುವಂತೆ ಬೆಳೆದು ನಿಂತಿದೆ ಈ ಗ್ರಾಮೀಣ ಭಾಗದಲ್ಲಿರುವ ಸರಕಾರಿ ಕನ್ನಡ ಮಾಧ್ಯಮ ಶಾಲೆ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ನರಿಮೊಗರುನಲ್ಲಿರುವ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ 100 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

1919ರಲ್ಲಿ ಪ್ರಾರಂಭಗೊಂಡ ಶಾಲೆ
ಶತ ಸಂಭ್ರಮವನ್ನು ಆಚರಿಸುತ್ತಿರುವ ಈ ವಿದ್ಯಾದೇಗುಲವನ್ನು 1919ರಲ್ಲಿ ಊರಿಗೊಂದು ಶಾಲೆಯಾಗಬೇಕು, ಜನರಿಗೆ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ದಿ| ಅನಂತ್‌ ನಾಯಕ್‌ ಯಾನೆ ದಾಮು ಮಾಸ್ಟ್ರೆ ಶಾಲೆಯನ್ನು ಊರ ಹಿರಿಯರಾದ ಅನಂತಯ್ಯ ಶೆಟ್ಟಿಯವರ ಚಾವಡಿಯಲ್ಲಿ ಪ್ರಾರಂಭ ಮಾಡಿದರು. ನಾಲ್ಕು ತಲೆಮಾರಿಗೆ ಸಾವಿರಾರು ಎಳೆಯ ಮನಸ್ಸುಗಳಿಗೆ ವಿದ್ಯಾರ್ಜನೆ ನೀಡಿ ನಮ್ಮ ಸಮಾಜದ ಸತøಜೆಗಳನ್ನಾಗಿ ರೂಪಿಸಿದ ಹೆಗ್ಗಳಿಕೆ ಈ ಶಾಲೆಗಿದೆ. ಶಾಲೆಯಲ್ಲಿ ಮೂಲ ಸೌಕರ್ಯಗಳಾದ ಶೌಚಾಲಯ, ತರಗತಿ ಕೊಠಡಿಗಳು, ಅಕ್ಷರ ದಾಸೋಹ, ವಿಶಾಲವಾದ ಮೈದಾನ ಇತ್ಯಾದಿಗಳಿದ್ದು, ಸುಮಾರು 200 ವಿದ್ಯಾರ್ಥಿಗಳು ವಿದ್ಯಾರ್ಜನೆ ನಡೆಸುತ್ತಿದ್ದಾರೆ. 8 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಶಾಲಾಭಿವೃದ್ಧಿ ಸಮಿತಿಯೂ ಶಾಲೆಯ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದೆ..

ಶಾಲೆಯಲ್ಲಿ ಕಲಿತ ಸಾಧಕರು
ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ, ಮಕ್ಕಳು ಆಂಗ್ಲಮಾಧ್ಯಮ ಶಾಲೆಯಲ್ಲಿ ಓದಿದರೆ ಮಾತ್ರವೇ ಬುದ್ಧಿವಂತರಾಗುತ್ತಾರೆ ಎಂಬ ಮನಃಸ್ಥಿತಿ ಮತ್ತು ತಪ್ಪು ಕಲ್ಪನೆ ಮಕ್ಕಳ ಹೆತ್ತವರಲ್ಲಿ ಇರುವುದರಿಂದ ಸರಕಾರಿ ಶಾಲೆಗಳಿಗೆ ಬೀಗ ಜಡಿಯುವ ಪರಿಸ್ಥಿತಿ ಉಂಟಾಗಿದೆ. ಇಂತಹ ಮನಸ್ಥಿತಿ ಹೋಗಲಾಡಿಸುವ ಮತ್ತು ಸರಕಾರಿ ಕನ್ನಡ ಮಾದ್ಯಮ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಎಂಬ ಮಾತಿಗೆ ಉದಾಹರಣೆ -ಈ ಶಾಲೆಯಲ್ಲಿ ಕಲಿತು ಈಗಾಗಲೇ ರಾಜಕೀಯ ಕ್ಷೇತ್ರ, ಸಾಮಾಜಿಕ, ಕಲಾರಾಧನೆ, ಯೋಧರಾಗಿ ಸೇವೆ ಸಲ್ಲಿಸುತ್ತಾ ಇರುವ ಹಿರಿಯ ವಿದ್ಯಾರ್ಥಿಗಳು. ನಾನಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವುದು ಕಲಿತ ಶಾಲೆಗೆ ಹೆಗ್ಗಳಿಕೆ ತಂದಿದೆ.

Advertisement

ಸೇವೆ ಸಲ್ಲಿಸಿದ ಮುಖ್ಯ ಗುರುಗಳು
ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಎ. ಅನಂತ ನಾಯಕ್‌ (ದಾಮು ಮಾಸ್ತರ್‌), ಡಿ. ಕುಶಾಲಪ್ಪ ಗೌಡ, ಎ. ಪುರುಷೋತ್ತಮ ನಾಯಕ್‌, ವಿ. ವೆಂಕಟರಮಣ ಹೆಬ್ಟಾರ್‌, ಎಸ್‌. ವೆಂಕಟ ರಾವ್‌, ಕೆಮ್ಮಿಂಜೆ ಕೃಷ್ಣಯ್ಯ, ಎಸ್‌. ನಾರಾಯಣ ರಾವ್‌, ಎಂ. ಸಾಬು ಸಾಹೇಬ್‌, ಎಲಿಜಾ ಪಾಸ್‌, ಕೆ. ರಾಮಚಂದ್ರ ನಾಯಕ್‌, ಎ. ನಾರಾಯಣ ಪ್ರಭು, ಯಶೋದಾ, ಕೆ. ಮುದರ, ಯಶೋದಾ ಬಿ., ವಿಜಯಲಕ್ಷ್ಮೀ ಎಸ್‌., ಸುಶೀಲಾ ಕುಮಾರಿ ಕೆ., ಶಂಕರಿ ಎಸ್‌., ನೀನಾ ಕುವೆಲ್ಲೋ, ಸುಮತಿ, ಭಾರತಿ ಬಿ. ಸೇವೆ ಸಲ್ಲಿಸಿದ್ದಾರೆ. ವಿಜಯ ನಾಯ್ಕ ಅವರು ಪ್ರಸ್ತುತ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಗ್ರಾಮೀಣ ಶಾಲೆ; ಪಟ್ಟಣದ ಕಳೆ
ಒಂದು ಅವಧಿಯಲ್ಲಿ 1,000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿದ್ದ ಶಾಲೆ ಪೈಪೋಟಿಗಳ ನಡುವೆ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿ ಶತಮಾನದ ಗತವೈಭವಕ್ಕೆ ಮರಳಿಸುವ ಪ್ರಯತ್ನ ನಡೆಯುತ್ತಿದೆ. ಶತಮಾನೋತ್ಸವ ಸಂಭ್ರಮದಲ್ಲಿರುವ ಶಾಲೆಯಲ್ಲಿ ಹಲವಾರು ಶಾಶ್ವತ ಯೋಜನೆಗಳನ್ನು ಹಮ್ಮಿಕೊಂಡು ಮಾದರಿ ಶಾಲೆಯಾಗಿ ರೂಪಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 60 ಅಡಿ ಅಗಲ ಮತ್ತು 120 ಅಡಿ ಉದ್ದದ ಅರುಣೋದಯ ಆಡಿಟೋರಿಯಮ್‌ ನಿರ್ಮಾಣ ಮಾಡಲಾಗಿದ್ದು, ಇಂಟರ್‌ಲಾಕ್‌ ಅಳವಡಿಸಲಾಗಿದೆ. ಇಂತಹ ಆಡಿಟೋರಿಯಂ ಯಾವುದೇ ಸರಕಾರಿ ಶಾಲೆಯಲ್ಲಿ ಕಾಣಸಿಗದು. ಜತೆಗೆ 3.5 ಎಕ್ರೆ ಜಾಗಕ್ಕೆ ಆವರಣ ಗೋಡೆ, ಕಾಂಕ್ರೀಟ್‌ ರಸ್ತೆ, ಕಂಪ್ಯೂಟರ್‌ ಸೌಲಭ್ಯ, ಜತೆಗೆ ಮಕ್ಕಳಲ್ಲಿ ಪರಿಸರ ಸ್ನೇಹಿ ವಾತಾವರಣ ಕಲ್ಪಿಸಲು ಉದ್ಯಾನವನ, ಕೈತೋಟ ನಿರ್ಮಾಣ ಮಾಡಲಾಗಿದೆ.

ಕಗ್ಗಲ್ಲಿನ ಶಿಲೆಯಂತಿರುವ ಮಗುವಿನ ಮನವನ್ನು ತಿದ್ದಿ ತೀಡಿ ಆ ಮಗು ಸಮಾಜಕ್ಕೆ ಆದರ್ಶ ವ್ಯಕ್ತಿಯನ್ನಾಗಿ ರೂಪುಗೊಳಿಸುವುದು ಶಾಲೆ, ಶಿಕ್ಷಕರ ಕರ್ತವ್ಯ. ನಮ್ಮ ಶಾಲೆಗೆ ನೂರು ವರ್ಷ ತುಂಬಿದ ಸವಿನೆನಪಿಗಾಗಿ ಅದ್ದೂರಿಯಾಗಿ ಶತಮಾನೋತ್ಸವ ಮಾಡಲಾಗಿದೆ. ಶತಮಾನೋತ್ಸವದ ಸಂದರ್ಭ ಇಲ್ಲಿ ಮುಖ್ಯ ಗುರುವಾಗಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೆಂದು ಭಾವಿಸಿದ್ದೇನೆ.
-ವಿಜಯ ನಾಯ್ಕ, ಮುಖ್ಯ ಗುರುಗಳು

ಶಾಲೆಗೆ 2019ರ ಫೆಬ್ರವರಿಯಲ್ಲಿ ಶತಮಾನ ತುಂಬಿದೆ. ಕನ್ನಡ ಭಾಷೆ ಮತ್ತು ಕನ್ನಡ ಶಾಲೆಯನ್ನು ಉಳಿಸುವ, ಬೆಳೆಸುವ ಪ್ರಯತ್ನದ ಜತೆಗೆ ಗ್ರಾಮೀಣ ಭಾಗದ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಸಕಲ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಊರಿನ ದಾನಿಗಳ, ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶತಮಾನೋತ್ಸವ ನೆನಪಿನಲ್ಲಿ ಉಳಿಯುವಂತೆ ಶಾಶ್ವತ ಯೋಜನೆಗಳಾದ ಶತಮಾನ ಸ್ಮಾರಕ ಆಡಿಟೋರಿಯಂ, ಶಾಲಾ ಉದ್ಯಾನವನ, ಕಂಪ್ಯೂಟರ್‌, ಇಂಟರ್‌ಲಾಕ್‌ ರಸ್ತೆ, ಕ್ರೀಡಾ ಸಾಮಗ್ರಿ, ವಿಜ್ಞಾನ ಪ್ರಯೋಗಾಲಯ, ಶಾಲಾ ಆವರಣ ಗೋಡೆ ಮಾಡಲಾಗಿದೆ.
-ಅರುಣ್‌ ಕುಮಾರ್‌ ಪುತ್ತಿಲ, ಅಧ್ಯಕ್ಷರು, ಶತಮಾನೋತ್ಸವ ಸಮಿತಿ

-   ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next