ನವದೆಹಲಿ:ಇಡೀ ದೇಶದ ಜನತೆಯನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಸಮೀಪಿಸುತ್ತಿದೆ. ಆದರೆ ತಿಹಾರ್ ಜೈಲು ಅಧಿಕಾರಿಗಳಿಗೆ ಈಗ ದೊಡ್ಡ ತಲೆನೋವಾಗಿರುವುದು ಜೈಲಿನಲ್ಲಿ ನೇಣುಗಂಬಕ್ಕೆ ಏರಿಸುವ ವ್ಯಕ್ತಿಯೇ ಇಲ್ಲ!
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಇನ್ನು ಒಂದು ತಿಂಗಳಿನಲ್ಲಿ ನಿರ್ಭಯಾ ಆರೋಪಿಗಳು ನೇಣುಗಂಬಕ್ಕೆ ಏರಲಿದ್ದಾರೆ. ಅದಕ್ಕಿರುವ ಆಯ್ಕೆಗಾಗಿ ಜೈಲಿನ ಹಿರಿಯ ಅಧಿಕಾರಿಗಳು ಕಾಯುತ್ತಿದ್ದಾರೆ. ನ್ಯಾಯಾಲಯ ಮರಣದಂಡನೆ ಕುರಿತು ಬ್ಲ್ಯಾಕ್ ವಾರಂಟ್ ಹೊರಡಿಸಿದ ನಂತರ ಆರೋಪಿಗಳನ್ನು ನೇಣಿಗೇರಿಸಲೇಬೇಕಾಗಿದೆ. ರಾಷ್ಟ್ರಪತಿ ಅಂಗಳದಲ್ಲಿರುವ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡ ಕೂಡಲೇ ವಾರಂಟ್ ಜಾರಿಯಾಗಲಿದೆ ಎಂದು ವಿವರಿಸಿದೆ.
ಸಂಸತ್ ಮೇಲೆ ದಾಳಿ ನಡೆಸಿದ್ದ ಆರೋಪಿ ಅಫ್ಜಲ್ ಗುರು ಕೊನೆಯದಾಗಿ ನೇಣುಗಂಬಕ್ಕೆ ಏರಿಸಲಾಗಿತ್ತು. ಈ ಸಂದರ್ಭದಲ್ಲಿ ತಿಹಾರ್ ಜೈಲಿನ ಅಧಿಕಾರಿಗಳು ಭದ್ರತೆಯನ್ನು ಹೊರಗಿಟ್ಟು ರಾತ್ರಿಹಗಲು ಈ ಕಾರ್ಯಕ್ಕಾಗಿ ಶ್ರಮಿಸಿದ್ದರು. ಅಫ್ಜಲ್ ಗೆ ಗಲ್ಲು ವಿಧಿಸುವ ವೇಳೆ ಸನ್ನೆ ಕೋಲನ್ನು ಜಾರಿಸುವ ಮೂಲಕ ಆರೋಪಿಯನ್ನು ನೇಣಿಗೇರಿಸಲು ಅಧಿಕಾರಿಗಳು ಒಪ್ಪಿದ್ದರು ಎಂದು ವರದಿ ತಿಳಿಸಿದೆ.
ಇದೀಗ ತಿಹಾರ್ ಜೈಲಿನ ಅಧಿಕಾರಿಗಳು ಅನಧಿಕೃತವಾಗಿ ನೇಣಿಗೇರಿಸುವ ವ್ಯಕ್ತಿ ಯಾರಾದರು ಸಿಗಬಹುದೇ ಎಂದು ಹುಡುಕಾಟ ನಡೆಸುತ್ತಿದ್ದಾರೆ. ಉತ್ತರಪ್ರದೇಶದ ಕೆಲವು ಹಳ್ಳಿಗಳಲ್ಲಿಯೂ ಹ್ಯಾಂಗ್ ಮ್ಯಾನ್ ಗಾಗಿ ವಿಚಾರಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.
ಒಂದು ವೇಳೆ ಈ ಬಾರಿಯೂ ತಿಹಾರ್ ಜೈಲಿನಲ್ಲಿ ಆರೋಪಿಗಳನ್ನು ನೇಣುಗಂಬಕ್ಕೆ ಏರಿಸುವ ವ್ಯಕ್ತಿಯ ನೇಮಕ ಮಾಡದಿದ್ದಲ್ಲಿ, ಬೇರೆ ವ್ಯಕ್ತಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಬೇಕಾಗುತ್ತದೆ. ನಮ್ಮ ಪ್ರಜಾಪ್ರಭುತ್ವದಲ್ಲಿ ತುಂಬಾ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪೂರ್ಣಾವಧಿಯ ಹ್ಯಾಂಗ್ ಮ್ಯಾನ್ ಅಗತ್ಯವಿರುವುದಿಲ್ಲ. ಅಲ್ಲದೇ ಆರೋಪಿಗಳಿಗೆ ನೇಣುಗಂಬಕ್ಕೆ ಏರಿಸುವ ಪೂರ್ಣಾವಧಿಯ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳುವುದು ಕಷ್ಟಕರ ಎಂದು ಜೈಲಿನ ಅಧಿಕಾರಿ ವಿವರಣೆ ನೀಡಿರುವುದಾಗಿ ವರದಿ ತಿಳಿಸಿದೆ.