ನವದೆಹಲಿ: ಎಂಟು ವರ್ಷಗಳ ಹಿಂದೆ ಅಂದರೆ 2012ರ ಡಿಸೆಂಬರ್ 16ರಂದು ರಾಷ್ಟ್ರ ರಾಜಧಾನಿಯಲ್ಲಿ 23 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿದ್ದ ಬಸ್ಸಿನಲ್ಲಿ ನಡೆದಿದ್ದ ಹೇಯ ಅತ್ಯಾಚಾರ ಮತ್ತು ಕ್ರೂರ ಕೊಲೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲದಲ್ಲಿ ಅಪರಾಧ ಸಾಬೀತುಗೊಂಡು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಅಪರಾಧಿಗಳನ್ನು ಇಂದು ಬೆಳಿಗ್ಗೆ 5.30 ಗಂಟೆಗೆ ದೆಹಲಿಯ ತಿಹಾರ್ ಜೈಲಿನಲ್ಲಿ ನೇಣಿಗೆ ಏರಿಸಲಾಗಿದೆ.
ಈ ಮೂಲಕ ಎಂಟು ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿಯನ್ನು ಮಾತ್ರವಲ್ಲದೇ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಅವರಿಗೆ ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬರೋಬ್ಬರಿ ಏಳು ವರ್ಷಗಳ ಬಳಿಕ ಶಿಕ್ಷೆ ಜಾರಿಯಾದಂತಾಗಿದೆ. ಈ ಮೂಲಕ ದುರುಳರ ಅಟ್ಟಹಾಸಕ್ಕೆ ಬಲಿಯಾಗಿದ್ದ ‘ನಿರ್ಭಯಾ’ ಆತ್ಮಕ್ಕೆ ಕೊನೆಗೂ ಶಾಂತಿ ದೊರೆತಂತಾಗಿದೆ.
ಒಂದೇ ಪ್ರಕರಣದಲ್ಲಿ ತಮ್ಮ ಅಪರಾಧ ಸಾಬೀತುಗೊಂಡು ಗಲ್ಲು ಶಿಕ್ಷೆಗೆ ಗುರಿಯಾದ ನಾಲ್ವರು ಅಪರಾಧಿಗಳನ್ನು ಏಕಕಾಲದಲ್ಲಿ ಗಲ್ಲಿಗೇರಿಸುತ್ತಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಥಮ ಪ್ರಕರಣ ಇದಾಗಿದೆ. ಇಷ್ಟು ಮಾತ್ರವಲ್ಲದೇ ದೇಶದ ಮಗಳೆಂದೇ ಕರೆಯಲ್ಪಡುತ್ತಿದ್ದ ‘ನಿರ್ಭಯಾ’ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆಯಾಗುತ್ತಿರುವ ವಿಚಾರದಲ್ಲೂ ಈ ಪ್ರಕರಣ ದೇಶದ ನ್ಯಾಯಾಂಗ ಇತಿಹಾಸದಲ್ಲಿ ಪ್ರಮುಖವಾಗಿ ದಾಖಲಾಗಿದೆ.
ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ರಾಮ್ ಸಿಂಗ್ 2013ರ ಮಾರ್ಚ್ 11ರಂದು ತಿಹಾರ್ ಜೈಲಿನ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದ ಮತ್ತು ಇನ್ನೊಬ್ಬ ಬಾಲಾಪರಾಧಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿ 2015ರ ಡಿಸೆಂಬರ್ 20ರಂದು ಬಿಡುಗಡೆಗೊಂಡಿದ್ದಾನೆ.
Related Articles
ನಿರ್ಭಯಾ ಅತ್ಯಾಚಾರಿ ಹಂತಕರು ನೇಣಿಗೆ ಕೊರಳೊಡ್ಡಿದರು ಎಂಬ ಸುದ್ದಿ ತಿಹಾರ್ ಜೈಲಿನೊಳಗಿಂದ ಬರುತ್ತಿದ್ದಂತೆ ಜೈಲಿನ ಹೊರಭಾಗದಲ್ಲಿ ನೆರೆದಿದ್ದ ಜನರು ಸಂಭ್ರಮಿಸಿದರು. ಮತ್ತು ನಿರ್ಭಯಾ ಆತ್ಮಕ್ಕೆ ತಡವಾಗಿಯಾದರೂ ನ್ಯಾಯ ಸಿಕ್ಕಿತೆಂದು ಪ್ರತಿಕ್ರಿಯಿಸಿದರು.
ಕೊನೇ ಕ್ಷಣದಲ್ಲಿ ಮರಣದಂಡನೆ ಶಿಕ್ಷೆ ತಪ್ಪಿಸುವ ಪ್ರಯತ್ನ ವಿಫಲ ; 5.30ಕ್ಕೆ ಗಲ್ಲು ಪಕ್ಕಾ
ಹೀಗೆ ನಡೆಯಿತು ಗಲ್ಲಿಗೇರಿಸುವ ಪ್ರಕ್ರಿಯೆ:
– ನಾಲ್ವರು ಅಪರಾಧಿಗಳಿಗೆ ವೈದ್ಯರು ಆರೋಗ್ಯ ತಪಾಸಣೆಯನ್ನು ನಡೆಸಿದರು. ಅವರ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ಖಚಿತಪಡಸಿದ ಬಳಿಕ ಈ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೆ ಪ್ರಾರಂಭಗೊಂಡಿತು.
– ವಧಾಕಾರ ಪವನ್ ಜಲ್ಲಾದ್ ಅಪರಾಧಿಗಳನ್ನು ಗಲ್ಲಿಗೇರಿಸಲು ನಿಗದಿಪಡಿಸಲಾಗಿದ್ದ ಜೈಲು ಸಂಖ್ಯೆ 3ಕ್ಕೆ ಆಗಮಿಸಿದರು.
– ನಾಲ್ವರು ಅಪರಾಧಿಗಳನ್ನು ವಧಾ ಸ್ಥಾನದತ್ತ ಕರೆದುಕೊಂಡು ಬರಲಾಯಿತು.
– ಬಳಿಕ ಮ್ಯಾಜಿಸ್ಟ್ರೇಟ್ ಅವರು ಈ ನಾಲ್ವರ ಡೆತ್ ವಾರಂಟ್ ಪತ್ರಕ್ಕೆ ಸಹಿ ಹಾಕಿದ ಬಳಿಕ ನಾಲ್ವರನ್ನು ನೇಣಿಗೇರಿಸಲು ಸೂಚನೆ ನೀಡಿದರು.
– ಮ್ಯಾಜಿಸ್ಟ್ರೇಟ್ ಅವರ ಸೂಚನೆಯಂತೆ ವಧಾಕಾರ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಪವನ್ ಗುಪ್ತಾ ಹಾಗೂ ಅಕ್ಷಯ್ ಠಾಕೂರ್ ಅವರನ್ನು ನೇಣಿಗೇರಿಸುತ್ತಾರೆ.
– ಬಳಿಕ ಈ ನಾಲ್ವರ ದೇಹಗಳು ಅರ್ಧಗಂಟೆ ನೇತಾಡುತ್ತಿರುವ ರೀತಿಯಲ್ಲೇ ಇರುತ್ತದೆ. ಅರ್ಧ ಗಂಟೆಯ ಬಳಿಕ ಈ ನಾಲ್ವರ ಮೃತದೇಹಗಳನ್ನು ನೇಣುಗಂಬದಿಂದ ಕೆಳಗಿಳಿಸುತ್ತಾರೆ. ಆ ಬಳಿಕ ವೈದ್ಯರು ಈ ದೇಹಗಳನ್ನು ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಚಿತಪಡಿಸುತ್ತಾರೆ.
– ಈ ಪ್ರಕ್ರಿಯೆ ಎಲ್ಲಾ ಮುಗಿದ ಬಳಿಕ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗಲಾಗುತ್ತದೆ.
– ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ನಾಲ್ವರ ಮೃತದೇಹಗಳನ್ನು ಅವರವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ. ಒಂದುವೇಳೆ ಮೃತರ ಕುಟುಂಬ ಸದಸ್ಯರು ಮೃತದೇಹಗಳನ್ನು ಪಡೆದುಕೊಳ್ಳಲು ನಿರಾಕರಿಸಿದಲ್ಲಿ ತಿಹಾರ್ ಜೈಲು ಅಧಿಕಾರಿಗಳೇ ಅಂತಹ ಮೃತದೇಹಗಳನ್ನು ಸೂಕ್ತರೀತಿಯಲ್ಲಿ ಅಂತ್ಯಕ್ರಿಯೆ ನಡೆಸುತ್ತಾರೆ.