ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ದೋಷಿಗಳಲ್ಲಿ ಒಬ್ಬನಾದ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.
ನಿರ್ಭಯಾ ಪ್ರಕರಣದಲ್ಲಿ ತನಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಪ್ರಶ್ನಿಸಿ ಪವನ್ ಗುಪ್ತಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. 2012ರಲ್ಲಿ ಘಟನೆ ನಡೆದ ಸಂದರ್ಭದಲ್ಲಿ ತಾನು ಅಪ್ರಾಪ್ತ ವಯಸ್ಸಿನವನಾಗಿದ್ದೆ ಎಂದು ಗುಪ್ತಾ ಅರ್ಜಿಯಲ್ಲಿ ವಾದಿಸಿದ್ದ.
ಅಪ್ರಾಪ್ತ ವಯಸ್ಸಿನವನಾಗಿದ್ದರಿಂದ ತನಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವಂತೆ ಮನವಿ ಮಾಡಿಕೊಂಡಿದ್ದ. ಏತನ್ಮಧ್ಯೆ ಪವನ್ ಗುಪ್ತಾ ಈ ಅಪ್ರಾಪ್ತ ಎಂದು ಪರಿಗಣಿಸುವಂತೆ ಕೋರಿ ಸುಪ್ರೀಂಗೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನೂ ಕೂಡಾ ವಜಾಗೊಳಿಸಿತ್ತು.
ನಿರ್ಭಯಾ ಪ್ರಕರಣದಲ್ಲಿ ನಾಲ್ವರೂ ದೋಷಿಗಳಿಗೆ ಶುಕ್ರವಾರ ಬೆಳಗ್ಗೆ 5.30ಕ್ಕೆ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲು ಡೆತ್ ವಾರಂಟ್ ಈಗಾಗಲೇ ಹೊರಡಿಸಲಾಗಿದ್ದು, ಶಿಕ್ಷೆ ಜಾರಿಗೊಳಿಸಲು ಈಗಾಗಲೇ ಸಿದ್ಧತೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.