Advertisement

ದೇವರನ್ನು ಮುಟ್ಟಿದ ನಿರಕ್ಷರಿ

01:09 PM Apr 21, 2020 | mahesh |

1486ರಲ್ಲಿ ಬಂಗಾಳದಲ್ಲಿ ಹುಟ್ಟಿದ ಚೈತನ್ಯ ಮಹಾಪ್ರಭುಗಳು, ವೈಷ್ಣವ ಪಂಥವನ್ನು ಭಾರತದ ಉದ್ದಗಲಕ್ಕೆ ಹರಡಿದ ಮಹಾಸಂನ್ಯಾಸಿ. ಅವರು, ಜನಸಾಮಾನ್ಯರ ಜೊತೆ ಬೆರೆಯುವುದನ್ನೇ ಹೆಚ್ಚು ಇಷ್ಟಪಡುತ್ತಿದ್ದರು. ದೇವರ ಸಾಕ್ಷಾತ್ಕಾರಕ್ಕೆ ಪಾಂಡಿತ್ಯದ ಅಗತ್ಯವಿಲ್ಲ, ಚೈತನ್ಯರು ಜಗತ್ತಿಗೆ ನೀಡಿದ ಮಂತ್ರ ಕೇವಲ ಹದಿನಾರು ಶಬ್ದಗಳದ್ದು: ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ | ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ || ಈ ಮಂತ್ರದಲ್ಲಿ ಬರುವ ಅನನ್ಯ ಶಬ್ದಗಳು ಮೂರೇ: ಹರೇ, ರಾಮ, ಕೃಷ್ಣ!

Advertisement

ಚೈತನ್ಯರು ತಮ್ಮ ಎಳವೆಯಲ್ಲೇ ಸಾಂಸಾರಿಕ ಬಂಧನ ಕಡಿದುಕೊಂಡು, ಸಂತ ಜೀವನವನ್ನು ಆತುಕೊಂಡರು. ಒಡಿಶಾದ ಪುರಿಯಲ್ಲಿ ತಮ್ಮ ಜೀವಿತದ ಬಹುಕಾಲವನ್ನು ಕಳೆದರು. ವೃಂದಾವನದಲ್ಲಿ ನೂರಾರು ವರ್ಷಗಳ ಕಾಲ ಮಣ್ಣಿನಡಿ ಹುಗಿದುಹೋಗಿದ್ದ ದೇವಸ್ಥಾನಗಳನ್ನು ಪತ್ತೆಹಚ್ಚಿ, ಪುನರುಜ್ಜೀವಗೊಳಿಸಿದರು. ದಕ್ಷಿಣ ಭಾರತ ಪ್ರವಾಸದ
ಸಂದರ್ಭದಲ್ಲಿ ಅವರು ದೇವಸ್ಥಾನವೊಂದರ ಪ್ರಾಂಗಣದಲ್ಲಿ ಉಪನ್ಯಾಸವೊಂದು ನಡೆಯುತ್ತಿದ್ದ ಸ್ಥಳಕ್ಕೆ ಬಂದರಂತೆ. ಪ್ರವಚನಕಾರರು ವೇದಿಕೆಯ ಮೇಲೆ ಶ್ರೀಕೃಷ್ಣನ ವಿಗ್ರಹವನ್ನಿಟ್ಟು, ತಾವು ಕೆಳಗೆ ನೆಲದಲ್ಲಿ ಕೂತು ಗೀತೆಯ ಪ್ರವಚನ ನಡೆಸುತ್ತಿದ್ದರಂತೆ. ನೂರಾರು ಸಂಖ್ಯೆಯಲ್ಲಿ ಜನ ಸೇರಿತ್ತು. ಆ ಸಭೆಯ ಕೊನೆಯಲ್ಲಿ ಒಬ್ಬ ಭಕ್ತ ಕೂತಿದ್ದ. ನೋಡಿದರೆ ಆತನೇನೂ ವೇದಶಾಸOಉಗಳನ್ನು ಓದಿಕೊಂಡವನಂತೆ ಕಾಣುತ್ತಿರಲಿಲ್ಲ. ತೋಟಗದ್ದೆಗಳಲ್ಲಿ ಕೆಲಸ ಮಾಡುವ ಶ್ರಮಜೀವಿಯಂತಿದ್ದ.

ಶಾಸ್ತ್ರ ಉಗ್ರಂಥಗಳನ್ನು ಓದುವುದಿರಲಿ, ಅಕ್ಷರಾಭ್ಯಾಸವೂ ಅವನಿಗೆ ಮರೀಚಿಕೆ. ಆದರೆ, ಆತ ತನ್ಮಯನಾಗಿ ಪ್ರವಚನ ಕೇಳುತ್ತ ಭಕ್ತಿಪರವಶತೆಯಿಂದ ಕಣ್ಣೀರುಗರೆಯುತ್ತಿದ್ದ. ಚೈತನ್ಯರು ಅವನ ಬಳಿ ಬಂದು “ಮಗೂ, ನೀನೇಕೆ ಕಣ್ಣೀರು ಹಾಕುತ್ತಿರುವೆ? ಪ್ರವಚನದ ಯಾವ ಸಂದೇಶ ನಿನ್ನನ್ನು ಇಷ್ಟೊಂದು ಗಾಢವಾಗಿ ತಟ್ಟಿತು?’ ಎಂದು ಕೇಳಿದರು.

ಆಗ ಆ ಭಕ್ತ, “ಸ್ವಾಮಿ, ಪ್ರವಚನದ ಸಂದೇಶ ನನಗೆ ಅರ್ಥವಾಗುವುದೆಲ್ಲಿ? ಅದು ವಿದ್ವಾಂಸರಿಗೆ ಮೀಸಲಾದ ಕೆನೆಮೊಸರು. ನನಗೆ ಅಲ್ಲಿ ವೇದಿಕೆಯಲ್ಲಿ ಕಾಣುತ್ತಿರುವುದು ಕೃಷ್ಣ, ಅರ್ಜುನ ಇಬ್ಬರೇ! ರಥದಲ್ಲಿ ಕೂತಿರುವ ಶ್ರೀಕೃಷ್ಣನ ದಿವ್ಯಮೂರ್ತಿಯನ್ನು ಕಂಡು ನನಗೇ ಗೊತ್ತಿಲ್ಲದಂತೆ ಕಣ್ಣೀರು ಇಳಿದುಬರುತ್ತಿದೆ’ ಎಂದನಂತೆ. ಈ ಪ್ರಕರಣವನ್ನು ಉದಾಹರಿಸಿ, ಚೈತನ್ಯರು ತಮ್ಮ ಶಿಷ್ಯರಿಗೆ ಹೇಳಿದರು: ಓದು-ಬರಹ ತಿಳಿಯದ ಆ ಭಕ್ತನೇ ನಿಜವಾದ ಜ್ಞಾನಿ. ಜ್ಞಾನದ ಏಣಿ ಬಳಸಿ ಉಳಿದವರು ಮುಟ್ಟಬಯಸಿದ್ದನ್ನು, ಆತ ಭಕ್ತಿಯ ಶಕ್ತಿಯಿಂದ ಮುಟ್ಟಿ ತಬ್ಬಿಕೊಂಡಾಗಿತ್ತು.

ರೋಹಿತ್‌ ಚಕ್ರತೀರ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next