Advertisement

Nipha: ನಿಫಾ ಸೋಂಕು: ಭಯ ಅನಗತ್ಯ, ಮುಂಜಾಗ್ರತೆ ಅವಶ್ಯ

12:59 AM Sep 14, 2023 | Team Udayavani |

ನೆರೆ ರಾಜ್ಯ ಕೇರಳದಲ್ಲಿ ಮತ್ತೂಮ್ಮೆ ನಿಫಾ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದ್ದು ಅಲ್ಲಿನ ಜನರನ್ನು ಆತಂಕಕ್ಕೀಡುಮಾಡಿದೆ. ಕಳೆದ ಮಾಸಾಂತ್ಯ ಮತ್ತು ಹಾಲಿ ತಿಂಗಳ ಆರಂಭದಲ್ಲಿ ಕೋಯಿಕ್ಕೋಡ್‌ನ‌ಲ್ಲಿ ಸಾವನ್ನಪ್ಪಿದ್ದ ಇಬ್ಬರಿಗೆ ನಿಫಾ ಸೋಂಕು ತಗಲಿದ್ದುದು ದೃಢಪಟ್ಟ ಬೆನ್ನಲ್ಲೇ ಈಗ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಮೃತರ ಇಬ್ಬರ ಸಂಬಂಧಿಕರಿಗೂ ನಿಫಾ ಸೋಂಕು ತಗಲಿರುವುದು ಖಚಿತಪಟ್ಟಿದೆ. ಇದೇ ವೇಳೆ ರಾಜ್ಯ ಸರಕಾರ ನಿಫಾ ಸೋಂಕಿನಿಂದ ಮೃತಪಟ್ಟವರು ಮತ್ತು ಸೋಂಕಿನಿಂದ ಬಾಧಿತರಾಗಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದ 700ಕ್ಕೂ ಅಧಿಕ ಮಂದಿಯನ್ನು ಗುರುತಿಸಿದ್ದು ಅವರೆಲ್ಲರನ್ನೂ ಪರೀಕ್ಷೆಗೊಳಪಡಿಸಲು ತೀರ್ಮಾನಿಸಿದೆ.

Advertisement

ಸೋಂಕು ಬಾಧಿತರು ಪ್ರಯಾಣಿಸಿದ ಮಾರ್ಗಗಳ ನಕ್ಷೆಯನ್ನು ಬಿಡುಗಡೆ ಮಾಡಿದ್ದು ಇವರೊಂದಿಗೆ ಇನ್ನಷ್ಟು ಮಂದಿ ಸಂಪರ್ಕ ಹೊಂದಿದ್ದರೇ ಎಂಬುದನ್ನು ಪತ್ತೆಹಚ್ಚಲು ಮುಂದಾಗಿದೆ. ಜತೆ ಯಲ್ಲಿ ಕೋಯಿಕ್ಕೋಡ್‌ ಜಿಲ್ಲೆಯ 8 ಪಂಚಾ ಯತ್‌ ವ್ಯಾಪ್ತಿಯ 40ಕ್ಕೂ ಅಧಿಕ ವಾರ್ಡ್‌ಗಳನ್ನು ಕಂಟೋನ್ಮೆಂಟ್‌ ವಲಯವೆಂದು ಘೋಷಿಸಿರುವ ಸರಕಾರ, ಸ್ಥಳೀಯರು, ಪ್ರವಾಸಿಗರಿಗೆ ನಿರ್ಬಂಧಗಳನ್ನು ವಿಧಿಸಿದೆ.

ಕೇರಳದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ನಾಲ್ಕನೇ ಬಾರಿಗೆ ನಿಫಾ ವೈರಸ್‌ ಕಾಣಿಸಿಕೊಂಡಿದ್ದು ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ. ಪ್ರಾಣಿಜನ್ಯ ಸೋಂಕು ಇದಾಗಿರುವುದರಿಂದ ಪ್ರಾಣಿಗಳೊಂದಿಗಿನ ಒಡನಾಟದ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯ. ಈ ಸೋಂಕಿಗೆ ಈವರೆಗೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಔಷಧವನ್ನು ಸಂಶೋಧಿಸಿಲ್ಲವಾದ್ದರಿಂದ ಈ ಸೋಂಕಿಗೆ ತುತ್ತಾದವರಲ್ಲಿ ಸಾವನ್ನಪ್ಪುವ ವರ ಸಂಖ್ಯೆ ಅಧಿಕ. ನಿಫಾ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸುವುದು ಅತ್ಯಗತ್ಯವಾ ಗಿದೆ. ಈ ಹಿನ್ನೆಲೆಯಲ್ಲಿ ಜನರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್‌ ಮಾದರಿಯಲ್ಲಿಯೇ ಮುಂಜಾಗ್ರತ ಕ್ರಮ ಗಳನ್ನು ಅನುಸರಿಸುವ ಮೂಲಕ ಈ ಸೋಂಕಿನ ಹರಡುವಿಕೆಗೆ ಕಡಿವಾಣ ಹಾಕಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಜನರಿಗೆ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಿದ್ದು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕ ರಿಗೆ ಮತ್ತು ಪ್ರವಾಸಿಗರಿಗೆ ನಿರ್ದೇಶ ನೀಡಿದೆ.

ಏತನ್ಮಧ್ಯೆ ನೆರೆಯ ರಾಜ್ಯವಾದ ಕರ್ನಾಟಕದ ಗಡಿ ಜಿಲ್ಲೆಗಳಲ್ಲೂ ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯ ಸರಕಾರ ಸಂಬಂಧಿತ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಗಡಿ ಜಿಲ್ಲೆಗಳಲ್ಲಿ ಜ್ವರ ಸಮೀಕ್ಷೆ, ಜ್ವರ, ಮೆದುಳು ಜ್ವರದ ಪ್ರಕರಣಗಳು ದಾಖಲಾದಲ್ಲಿ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾಡುವಂತೆಯೂ ಈ ಜಿಲ್ಲೆಗಳ ಎಲ್ಲ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ನಿರ್ದೇಶನ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ನಿಫಾ ಸೋಂಕಿನಿಂದ ಪಾರಾಗಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆಯೂ ಸಲಹೆ ನೀಡಿದೆ.
ನಿಫಾ ಸೋಂಕಿನ ಬಗೆಗೆ ಜನರು ಯಾವುದೇ ಭೀತಿಗೊಳಗಾಗುವ ಅಗತ್ಯವಿಲ್ಲ. ಆದರೆ ಯಾವುದೇ ತೆರನಾದ ರೋಗಲಕ್ಷಣಗಳು ಕಂಡುಬಂದಲ್ಲಿ ಅನಗತ್ಯ ಗೊಂದಲಕ್ಕೀಡಾಗದೆ ತತ್‌ಕ್ಷಣ ತಜ್ಞ ವೈದ್ಯರನ್ನು ಭೇಟಿಯಾಗಿ ಆವಶ್ಯಕ ತಪಾಸಣೆಗಳನ್ನು ಮಾಡಿಕೊಳ್ಳಬೇಕು. ಆರೋಗ್ಯ ಇಲಾಖೆ ನೀಡಿರುವ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಈ ಸೋಂಕಿನಿಂದ ಪಾರಾಗಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next