Advertisement

ಕೇರಳಕ್ಕೆ ನಿಫಾ ಪ್ರವೇಶ! 

10:51 PM Sep 05, 2021 | Team Udayavani |

ತಿರುವನಂತಪುರ: ಕೊರೊನಾ ಸೋಂಕಿನ ಅಬ್ಬರದಿಂದ ಹೊರಬರಲು ಪೇಚಾಡುತ್ತಿರುವಾಗಲೇ ಕೇರಳಕ್ಕೆ ಹೊಸ ಸಂಕಷ್ಟ ಎದುರಾಗಿದ್ದು, ಮತ್ತೆ ನಿಫಾ ವೈರಸ್‌ ವಕ್ಕರಿಸಿದೆ. ಕಲ್ಲಿಕೋಟೆಯಲ್ಲಿ ನಿಫಾ ಸೋಂಕಿಗೆ 12 ವರ್ಷದ ಬಾಲಕ ಅಸುನೀಗಿದ್ದಾನೆ. ಅಲ್ಲದೇ, ಇಬ್ಬರು ಆರೋಗ್ಯ ಕಾರ್ಯಕರ್ತರಲ್ಲೂ ಸೋಂಕಿನ ಲಕ್ಷಣಗಳು ಗೋಚರಿಸಿದ್ದು, ರಾಜ್ಯವನ್ನು ಆತಂಕಕ್ಕೆ ತಳ್ಳಿದೆ.

Advertisement

ಈ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿರುವ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌, “4 ದಿನಗಳ ಹಿಂದೆ ಭಾರೀ ಜ್ವರ ಹಿನ್ನೆಲೆಯಲ್ಲಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ (ಎನ್‌ಐವಿ)ಗೆ ಕಳುಹಿಸಿಕೊಡಲಾಗಿತ್ತು. ವರದಿಯಲ್ಲಿ ನಿಫಾ ದೃಢಪಟ್ಟಿದೆ. ರವಿವಾರ ಬೆಳಗ್ಗೆ ಬಾಲಕ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ’ ಎಂದು ಹೇಳಿದ್ದಾರೆ.

20 ಮಂದಿ ಆಸ್ಪತ್ರೆಗೆ ದಾಖಲು: ಬಾಲಕನೊಂದಿಗೆ ಸಂಪರ್ಕ ಸಾಧಿಸಿದ್ದ 188 ಮಂದಿಯನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ 20 ಮಂದಿ ಹೈರಿಸ್ಕ್ ಸಂಪರ್ಕಿತರಾಗಿದ್ದು ಅವರನ್ನು ಕಲ್ಲಿಕೋಟೆ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರಲ್ಲಿ ರೋಗಲಕ್ಷಣ ಕಂಡುಬಂದಿದ್ದು, ಅವರಿಬ್ಬರೂ ಆರೋಗ್ಯ ಸಿಬಂದಿಯೇ ಆಗಿದ್ದಾರೆ ಎಂದೂ ಸಚಿವೆ ವೀಣಾ ತಿಳಿಸಿದ್ದಾರೆ. ಮೃತ ಬಾಲಕನ ಮನೆಯ 3 ಕಿ.ಮೀ. ವ್ಯಾಪ್ತಿಯನ್ನು ಕಂಟೈನ್ಮೆಂಟ್‌ ವಲಯ ಎಂದು ಘೋಷಿ ಸಲಾಗಿದೆ. ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧಗಳ ಲಭ್ಯತೆ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಎರಡು ಸಹಾಯವಾಣಿ ಆರಂಭಿಸಲಾಗಿದೆ ಎಂದಿದ್ದಾರೆ.

ತ.ನಾಡಿನಲ್ಲೂ ಕಟ್ಟೆಚ್ಚರ: ಕೇರಳದಲ್ಲಿ ನಿಫಾ ಪತ್ತೆ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲೂ ಮುಂಜಾಗ್ರತೆ ವಹಿಸಲಾಗಿದೆ. 9 ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳದಿಂದ ಬರುವ ಪ್ರಯಾಣಿಕರನ್ನು ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ, ಕೇಂದ್ರ ಸರಕಾರ ರಾಷ್ಟ್ರೀಯ ರೋಗ ತಡೆ ಮತ್ತು ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ)ದ ತಜ್ಞರ ತಂಡವನ್ನು ಕೇರಳಕ್ಕೆ ರವಾನಿಸಿದೆ.

42,766 ಕೊರೊನಾ ಪ್ರಕರಣ: ಈ ನಡುವೆ, ದೇಶಾದ್ಯಂತ ಶನಿವಾರದಿಂದ ಭಾನುವಾರಕ್ಕೆ 42,766 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 308 ಮಂದಿ ಅಸುನೀಗಿದ್ದಾರೆ. ಕೇರಳದಲ್ಲಿ ರವಿವಾರ 26,701 ಮಂದಿಗೆ ಕೊರೊನಾ ದೃಢಪಟ್ಟಿದ್ದು, 74 ಮಂದಿ ಸಾವಿಗೀಡಾಗಿದ್ದಾರೆ.

Advertisement

ಲಸಿಕೆ ನೀಡಿಕೆ: ಜಿ7 ದೇಶಗಳನ್ನೇ ಹಿಂದಿಕ್ಕಿದ ಭಾರತ :

ದೇಶದಲ್ಲಿ ಕೊರೊನಾ ಲಸಿಕೆ ಹಾಕುವ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಜಿ-7 ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ, ಕಳೆದ ತಿಂಗಳಲ್ಲಿ ದೇಶದಲ್ಲಿ ನೀಡಲಾಗಿರುವ ಪ್ರಮಾಣವೇ ಹೆಚ್ಚಿದೆ. ಹೀಗೆಂದು ಕೇಂದ್ರ ಸರಕಾರವೇ ಮಾಹಿತಿ ನೀಡಿದೆ. ದೇಶದಲ್ಲಿ ಆಗಸ್ಟ್‌ನಲ್ಲಿ 180 ದಶಲಕ್ಷ ಡೋಸ್‌ ಲಸಿಕೆ ನೀಡಲಾಗಿದೆ. ಕೆನಡಾ, ಯುನೈಟೆಡ್‌ ಕಿಂಗ್‌ಡಮ್‌, ಅಮೆರಿಕ, ಇಟಲಿ, ಜರ್ಮನಿ, ಫ್ರಾನ್ಸ್‌ ಮತ್ತು ಜಪಾನ್‌ಗಳಿಗೆ ಹೋಲಿಕೆ ಮಾಡಿದರೆ ದೇಶದ ಸಾಧನೆಯೇ ಪಾರಮ್ಯ ಮೆರೆದಿದೆ. ಕೆನಡಾ 3 ದಶಲಕ್ಷ, ಜಪಾನ್‌ 40 ದಶಲಕ್ಷ ಡೋಸ್‌ ಲಸಿಕೆಗಳನ್ನು ನೀಡಿದೆ. ಜಿ7 ರಾಷ್ಟ್ರಗಳ ಒಟ್ಟೂ ಲಸಿಕೆ ವಿತರಣೆಗೆ ಹೋಲಿಸಿದರೆ ಭಾರತದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next