ಇಂದೋರ್: 9 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದು, ಹಲ್ಲೆಯಿಂದ ಗಾಯಗೊಂಡಿರುವ ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಇಂದೋರ್‌ನ ಉಪ ಪೊಲೀಸ್ ಆಯುಕ್ತ ಅಮಿತ್ ತೋಲಾನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಾಲಕಿಯನ್ನು ಕಟ್ಟಡ ನಿರ್ಮಾಣ ಸ್ಥಳದಿಂದ ಅಪಹರಿಸಿ ಅತ್ಯಾಚಾರವೆಸಗಲಾಗಿದೆ. ಆಕೆ ಕಾವಲುಗಾರನ ಮಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯು ತನ್ನ ಪೋಷಕರೊಂದಿಗೆ ಸಣ್ಣ ಗುಡಿಸಲಿನಲ್ಲಿ ಮಲಗಿದ್ದಾಗ 32 ವರ್ಷದ ಆರೋಪಿ ಅವಳನ್ನು ಅಪಹರಿಸಿ ನಿರ್ಮಾಣ ಸ್ಥಳದ ಇನ್ನೊಂದು ಬದಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಹಲ್ಲೆಯಿಂದ ಸಂತ್ರಸ್ತೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ ಎಂದು ಅವರು ಹೇಳಿದರು.
ಬಾಲಕಿಯ ಅಳಲು ಕೇಳಿದ ಆಕೆಯ ಪೋಷಕರು ಆಕೆಯ ರಕ್ಷಣೆಗೆ ಮುಂದಾದರು. ಆಕೆಯನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Related Articles
ಆರೋಪಿ ಇಂದೋರ್ ಜಿಲ್ಲೆಯ ಅಹಿರ್ಖೇಡಿ ಗ್ರಾಮದ ನಿವಾಸಿಯಾಗಿದ್ದಾನೆ. ಶನಿವಾರ ಸಂಜೆ ಆತನನ್ನು ಬಂಧಿಸಲಾಗಿದ್ದು, ತಾನು ಅಪರಾಧ ಎಸಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಆರೋಪಿ ಈ ಹಿಂದೆಯೂ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ. ಆರೋಪಿ ಮಾನಸಿಕ ಅಸ್ಥಿರ ಮತ್ತು ಮಾದಕ ವ್ಯಸನಿ ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.