Advertisement

ಮಮತಾ ಬ್ಯಾನರ್ಜಿ ಹೊಸ ಸಾಹಸ : ಸಂಪುಟಕ್ಕೆ 9 ಮಂದಿ ಸೇರ್ಪಡೆ

10:55 PM Aug 03, 2022 | Team Udayavani |

ಕೋಲ್ಕತಾ : ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ಎಸಗಿ ಜಾರಿ ನಿರ್ದೇಶನಾಲಯದಿಂದ ಸಚಿವ ಪಾರ್ಥ ಚಟರ್ಜಿ ಬಂಧನಕ್ಕೊಳಗಾಗಿ ಭಾರೀ ಮುಜುಗರ ಅನುಭವಿಸುತ್ತಿರುವ ವೇಳೆಯಲ್ಲೇ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಸಂಪುಟ ವಿಸ್ತರಣೆ ಮಾಡಿ ಹೊಸ ಸಾಹಸ ತೋರಿ ಜನರ ಯೋಚನೆಗಳನ್ನು ಬದಲಾಯಿಸುವ ಪ್ರಯತ್ನ ಮಾಡಿದೆ.

Advertisement

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟದ ಪ್ರಮುಖ ವಿಸ್ತರಣೆಯಲ್ಲಿ ಬಾಬುಲ್ ಸುಪ್ರಿಯೋ ಸೇರಿದಂತೆ 9  ಶಾಸಕರು ಬುಧವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಳೆದ ವರ್ಷ ಕೇಂದ್ರ ಸಂಪುಟದಿಂದ ಕೈಬಿಡಲ್ಪಟ್ಟ ನಂತರ ಬಿಜೆಪಿ ತೊರೆದು ಟಿಎಂಸಿಗೆ ಸೇರಿದ ಮಾಜಿ ಕೇಂದ್ರ ಸಚಿವ, ಬ್ಯಾಲಿಗುಂಗೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಸುಪ್ರಿಯೋ ಸೇರಿ ಸ್ನೇಹಸಿ ಚಕ್ರವರ್ತಿ, ಪಾರ್ಥ ಭೌಮಿಕ್, ಉದಯನ್ ಗುಹಾ ಮತ್ತು ಪ್ರದೀಪ್ ಮಜುಂದಾರ್ ಅವರಿಗೆ ರಾಜ್ಯಪಾಲ ಲಾ ಗಣೇಶನ್ ಅವರು ರಾಜಭವನದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಬೋಧಿಸಿದರು. ಬಾಬುಲ್ ಸುಪ್ರಿಯೋ ಅವರಿಗೆ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ನೀಡಲಾಗಿದೆ.

ಬಿಜೆಪಿ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆಯಾಗಿಸಿ ಭಾರಿ ಪ್ರಶಂಸೆಗೊಳಗಾಗಿರುವ ಸಂದರ್ಭದಲ್ಲಿ, ಮಮತಾ ಬ್ಯಾನರ್ಜಿ ಅವರು ಬುಡಕಟ್ಟು ನಾಯಕ ಬಿರ್ಬಹಾ ಹನ್ಸ್ದಾ ಅವರಿಗೂ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಬಿಪ್ಲಬ್ ರಾಯ್ ಚೌಧರಿ ಸ್ವತಂತ್ರ ಉಸ್ತುವಾರಿಯೊಂದಿಗೆ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.ತಜ್ಮುಲ್ ಹೊಸೈನ್ ಮತ್ತು ಸತ್ಯಜಿತ್ ಬರ್ಮನ್ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸಚಿವರಾಗಿದ್ದ ಸುಬ್ರತಾ ಮುಖರ್ಜಿ, ಸಾಧನ್ ಪಾಂಡೆ ಅವರು ನಿಧನ ಹೊಂದಿದ್ದರು. ಎಸ್‌ಎಸ್‌ಸಿ ನೇಮಕಾತಿ ಹಗರಣದಲ್ಲಿ ಪಾರ್ಥ ಚಟರ್ಜಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ ನಂತರ ಪಾರ್ಥ ಚಟರ್ಜಿ ಹೊಂದಿದ್ದ ನಾಲ್ಕು ಸೇರಿದಂತೆ 11 ಇಲಾಖೆಗಳ ಉಸ್ತುವಾರಿಯನ್ನು ಸಿಎಂ ಮಮತಾ ಬ್ಯಾನರ್ಜಿ ಹೊಂದಿದ್ದರು. ಚಟರ್ಜಿ ಅವರು ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮಗಳು, ಐಟಿ ಮತ್ತು ಎಲೆಕ್ಟ್ರಾನಿಕ್ಸ್, ಸಂಸದೀಯ ವ್ಯವಹಾರಗಳು, ಸಾರ್ವಜನಿಕ ಉದ್ಯಮಗಳು ಮತ್ತು ಕೈಗಾರಿಕಾ ಪುನರ್ನಿರ್ಮಾಣ ಇಲಾಖೆಗಳ ಉಸ್ತುವಾರಿ ಸಚಿವರಾಗಿ ಪ್ರಭಾವಿ ಎನಿಸಿಕೊಂಡಿದ್ದರು.

Advertisement

ಕಳೆದ 11 ವರ್ಷಗಳಲ್ಲಿ, ಮಮತಾ ಬ್ಯಾನರ್ಜಿ ಅಧಿಕಾರದಲ್ಲಿ ಕ್ಯಾಬಿನೆಟ್ ಪುನರ್ ರಚನೆ,ವಿಸ್ತರಣೆಯ ಕೆಲವೇ ಕೆಲವು ನಿದರ್ಶನಗಳಿದ್ದು, ಅವು ಕೂಡ ಸಣ್ಣ ಮಟ್ಟದ್ದಾಗಿತ್ತು.ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು,ಹಿಂದೆಂದೂ ಇಷ್ಟು ಸಂಖ್ಯೆಯಲ್ಲಿ ಹೊಸ ಮುಖಗಳನ್ನು ಸೇರ್ಪಡೆಗೊಳಿಸಿರಲಿಲ್ಲ.

ಸೋಮವಾರ, ಬ್ಯಾನರ್ಜಿ ಅವರು ಪಕ್ಷದಲ್ಲೂ ಭಾರಿ ಬದಲಾವಣೆ ಮಾಡಿದ್ದು, 35 ಜಿಲ್ಲೆಗಳ 16 ಜಿಲ್ಲಾ ನೇತೃತ್ವವನ್ನು ಬದಲಾಯಿಸುವ ಮೂಲಕ ಪರೀಕ್ಷೆ ಮಾಡಿದ್ದಾರೆ. ಹಲವಾರು ಮಂದಿ ಕಳಪೆ ಕಾರ್ಯನಿರ್ವಹಣೆ ಮಾಡಿದವರನ್ನು ತೆಗೆದುಹಾಕಲಾಗಿದ್ದು, ಕೆಲವರನ್ನು ಸಾಂಸ್ಥಿಕ ಕರ್ತವ್ಯಗಳಿಂದ ಮುಕ್ತಗೊಳಿಸಲಾಗಿದೆ.

ಕಳೆದ ವರ್ಷ ಸತತ ಮೂರನೇ ಅವಧಿಗೆ ಟಿಎಂಸಿ ಅಧಿಕಾರಕ್ಕೆ ಬಂದ ನಂತರ ಸಚಿವ ಸಂಪುಟದ ವಿಸ್ತರಣೆಯು ಬಂಗಾಳದ ಅತ್ಯಂತ ದೊಡ್ಡ ರಾಜಕೀಯ ಬೆಳವಣಿಗೆಯಾಗಿದ್ದು. ಪಕ್ಷವು ಬಿಸಿ ಎದುರಿಸುತ್ತಿರುವ ವೇಳೆಯಲ್ಲೇ ಮಾಡಲಾಗಿರುವ ಸಂಪುಟ ವಿಸ್ತರಣೆ ಜನರ ಯೋಚನೆ ಬದಲಿಸುವಲ್ಲಿ ಯಶಸ್ವಿಯಾಗುವುದೇ ಕಾದು ನೋಡಬೇಕು.

ವಿಷ್ಣುದಾಸ್ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next