ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಯ ಭರಾಟೆ ಮತ್ತೆ ಜೋರಾಗುತ್ತಿದೆ. ಜನವರಿ ಆರಂಭದ ಎರಡು ವಾರ ಬಿಡುಗಡೆ ಸಂಖ್ಯೆ ಕಡಿಮೆ ಇತ್ತು ಬೇಸರಿಸಿಕೊಂಡವರು ತಲೆಮೇಲೆ ಕೈ ಹೊತ್ತುಕೊಂಡು ಎದುರು ನೋಡುವ ಮಟ್ಟಕ್ಕೆ ಈಗ ಚಿತ್ರಗಳು ಬಿಡುಗಡೆಯನ್ನು ಘೋಷಿಸಿವೆ. ಕಳೆದ ಎರಡು ವಾರಗಳಲ್ಲಿ ಆರು, ಏಳು ಚಿತ್ರಗಳು ಬಿಡುಗಡೆಯಾಗಿದ್ದರೆ ಈ ವಾರ ಬರೋಬ್ಬರಿ ಒಂಭತ್ತು ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.
ಈ ಮೂಲಕ ಕನ್ನಡ ಚಿತ್ರರಂಗ ಈ ವಾರ ಮತ್ತಷ್ಟು ರಂಗೇರುತ್ತಿದೆ. ಅಷ್ಟಕ್ಕೂ ಈ ವಾರ ತೆರೆಕಾಣುವ ಒಂಭತ್ತು ಚಿತ್ರಗಳು ಯಾವುದೆಂದರೆ “ಮತ್ತೆ ಉದ್ಭವ’, “ಮಾಲ್ಗುಡಿ ಡೇಸ್’, “ಜಂಟಲ್‌ಮೆನ್’, “ಬಿಲ್‌ಗೇಟ್ಸ್’, “ದೀಯಾ’, “ಡೆಡ್ಲಿ ಅಫೇರ್’, “ಓಜಸ್’, “ಥರ್ಡ್ ಕ್ಲಾಸ್’ ಹಾಗೂ “ಜಿಲ್ಕ’ ಚಿತ್ರಗಳು ಈ ವಾರ ತೆರೆಕಾಣುತ್ತಿವೆ. ಈ ಒಂಭತ್ತು ಚಿತ್ರಗಳಲ್ಲಿ ನಾಲ್ಕೈದು ಚಿತ್ರಗಳು ಒಂದಲ್ಲ, ಒಂದು ಕಾರಣಕ್ಕಾಗಿ ನಿರೀಕ್ಷೆ ಹುಟ್ಟಿಸಿವೆ. ಆದರೆ, ಇಷ್ಟೊಂದು ಬಿಡುಗಡೆ ಭರಾಟೆ ಮಧ್ಯೆ ಬಂದು ಕಳೆದು ಹೋದರೆ ಎಂಬ ಭಯ ನಿರ್ಮಾಪಕರನ್ನು ಕಾಡುತ್ತಿರೋದಂತೂ ಸುಳ್ಳಲ್ಲ.
ಈ ಭಯದ ಮಧ್ಯೆಯೂ ಬಿಡುಗಡೆ ಮಾಡುತ್ತಿ ರೋದಕ್ಕೆ ಕಾರಣವೇನು ಎಂದರೆ ಐಪಿಎಲ್ ಹಾಗೂ ಮುಂದೆ ಬರಲಿರುವ ಸ್ಟಾರ್ ಸಿನಿಮಾಗಳು. ಹೌದು, ಹೊಸಬರಿಗೆ ಸಮಯ ಇರೋದು ಮಾರ್ಚ್ ಕೊನೆವರೆಗೆ ಎಂಬ ಮಾತು ಈಗ ಗಾಂಧಿನಗರದಲ್ಲಿ ಓಡಾಡುತ್ತಿದೆ. ಅದಕ್ಕೆ ಕಾರಣ ಮಾರ್ಚ್ ಕೊನೆ ವಾರದಲ್ಲಿ ಆರಂಭವಾಗುವ ಐಪಿಎಲ್. ಐಪಿಎಲ್ ಆರಂಭವಾದರೆ ಜನ ಚಿತ್ರಮಂದಿರಕ್ಕೆ ಬರಲ್ಲ ಎಂಬ ಮಾತಿದೆ. ಈ ಕಾರಣ ದಿಂದಲೂ ಹೊಸಬರು ತಮ್ಮ ಚಿತ್ರವನ್ನು ತರಾತುರಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಮಾರ್ಚ್‌ನಲ್ಲಿ ಆರಂಭವಾಗುವ ಐಪಿಎಲ್ ಮೇವರೆಗೆ ನಡೆಯಲಿದೆ.
ಈ ಮಧ್ಯೆ ಏಪ್ರಿಲ್‌ನಲ್ಲಿ ಒಂದಷ್ಟು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಲಿವೆ. ಆಗ ಮತ್ತೆ ಹೊಸಬರಿಗೆ ಚಿತ್ರಮಂದಿರ ಸಮಸ್ಯೆ ಎದುರಾಗುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ಫೆಬ್ರವರಿಯಿಂದಲೇ ಸಿನಿಮಾಗಳ ಬಿಡುಗಡೆ ಭರಾಟೆ ಜೋರಾಗಿದೆ. ಈ ವಾರ (09) ಒಂಭತ್ತು ಚಿತ್ರ ತೆರೆಕಂಡರೆ ಮುಂದಿನ ವಾರ (ಫೆ.14) ರಂದು ಕೂಡಾ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಲಿವೆ. ಕಳೆದ ವರ್ಷ ನವೆಂಬರ್ ಒಂದೇ ತಿಂಗಳಲ್ಲಿ 34ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದವು. ಈ ವರ್ಷ ಯಾವ ತಿಂಗಳಲ್ಲಿ ಎಷ್ಟು ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂದು ಕಾದು ನೋಡಬೇಕು.