Advertisement

ಭಾರತ ರತ್ನಕ್ಕೆ ನಿಜಲಿಂಗಪ್ಪ ಹೆಸರು ಶಿಫಾರಸು:ಸಿಎಂ

07:05 AM Dec 11, 2017 | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ಎಸ್‌. ನಿಜಲಿಂಗಪ್ಪ ಅವರಿಗೆ “ಭಾರತ ರತ್ನ’ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಎಸ್‌. ನಿಜಲಿಂಗಪ್ಪ ಅವರ ಜನ್ಮದಿನಾಚರಣೆ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿ ಅವರ ಪ್ರತಿಮೆಗೆ ಭಾನುವಾರ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ನಿಜಲಿಂಗಪ್ಪನವರು ರಾಜ್ಯ ಮತ್ತು ದೇಶ ಕಂಡ ಅಪ್ರತಿಮ ನಾಯಕ. ದೇಶದಲ್ಲೇ ಅವರಿಗೆ ಉನ್ನತ ಸ್ಥಾನ ಸಿಗಬೇಕಿತ್ತು. ಹಾಗಾಗಿ, ಅವರಿಗೆ ಭಾರತ್ನ ರತ್ನ ನೀಡುವ ಬಗ್ಗೆ ಶಿಫಾರಸು ಮಾಡಲಾಗುವುದು ಎಂದರು.

ಅಲ್ಲದೇ ನಿಜಲಿಂಗಪ್ಪನವರು ರಾಷ್ಟ್ರ ನಾಯಕರಾಗಿದ್ದರಿಂದ ಸಂಸತ್‌ ಭವನದಲ್ಲಿ ಅವರ ಪ್ರತಿಮೆ ಸ್ಥಾಪನೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. 

ಚಿತ್ರದುರ್ಗದಲ್ಲಿರುವ ಅವರ ನಿವಾಸವನ್ನು ಸ್ಮಾರಕವನ್ನಾಗಿ ಮಾಡಲಾಗಿದ್ದು, ಅದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿಯವರು ಇದೇ ವೇಳೆ ಭರವಸೆ ನೀಡಿದರು.

ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷರಾಗಿ, ಎಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಕೈ ಮತ್ತು ಬಾಯಿ ಶುದ್ಧವಾಗಿಟ್ಟುಕೊಂಡಿದ್ದ ಜನ ನಾಯಕ. ನೀರಾವರಿ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಮರೆಯುಂತಿಲ್ಲ ಎಂದು ಸಿದ್ದರಾಮಯ್ಯ ಸ್ಮರಿಸಿದರು.

Advertisement

ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್‌, ಮೇಯರ್‌ ಸಂಪತ್‌ರಾಜ್‌, ನಿಜಲಿಂಗಪ್ಪನವರ ಕುಟುಂಬದ ಸದಸ್ಯರು ಇದ್ದರು.

ಪ್ರತಿಮೆ ಬದಲಾವಣೆ: ಭರವಸೆ
ವಿಧಾನಸೌಧದ ಅವರಣರಲ್ಲಿರುವ ನಿಜಲಿಂಗಪ್ಪ ಅವರ ಪ್ರತಿಮೆ ಅವರನ್ನು ಹೋಲುವುದಿಲ್ಲ. ಹಾಗಾಗಿ ಅದನ್ನು ಬದಲಾಯಿಸಬೇಕು ಎಂದು ವಾಟಾಳ್‌ ನಾಗರಾಜ್‌ ಮನವಿ ಸಲ್ಲಿಸಿದ್ದಾರೆ. ಅದರಂತೆ ಪ್ರತಿಮೆ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದ ಆವರಣದಲ್ಲಿರುವ ನಿಜಲಿಂಗಪ್ಪನವರ ಪ್ರತಿಮೆ ಅವರನ್ನು ಹೋಲುವುದಿಲ್ಲ ಸಾಮಾನ್ಯವಾಗಿ ನಿಜಲಿಂಗಪ್ಪನವರು ಜುಬ್ಟಾ ಮತ್ತು ಕಚ್ಚೆ ಧರಿಸುತ್ತಿದ್ದರು. ಆದರೆ, ಕೋಟು-ಪ್ಯಾಂಟು ಧರಿಸಿದ ಪ್ರತಿಮೆ ಸ್ಥಾಪಿಸಲಾಗಿದೆ. ಅದನ್ನು ಬದಲಾಯಿಸಿ, ಜುಬ್ಟಾ ಮತ್ತು ಕಚ್ಚೆಯಲ್ಲಿರುವ ಪ್ರತಿಮೆ ಸ್ಥಾಪಿಸುವಂತೆ ವಾಟಾಳ್‌ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಯವರು, ಹೌದು, ಸಾಮಾನ್ಯವಾಗಿ ನಿಜಲಿಂಗಪ್ಪನವರು ಜುಬ್ಟಾ ಮತ್ತು ಕಚ್ಚೆ ಹಾಕುತ್ತಿದ್ದು, ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೂಟು, ಪ್ಯಾಂಟು ಧರಿಸುತ್ತಿದ್ದದ್ದು ನಿಜ. ಹಾಗಾಗಿ, ವಾಟಾಳ್‌ ನಾಗರಾಜ್‌ ಮನವಿಯಂತೆ ಪ್ರತಿಮೆ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next