ಮೈಸೂರು: ಜೆಡಿಎಸ್ ಯುವ ಮುಖಂಡ ನಿಖೀಲ್ ಕುಮಾರಸ್ವಾಮಿ ಹಾಗೂ ಜಿ.ಟಿ.ದೇವೇಗೌಡ ಅವರ ಪುತ್ರ ಜಿ.ಟಿ.ಹರೀಶ್‌ಗೌಡ ಚಾಮುಂಡಿಬೆಟ್ಟದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು, ರಾಜಕೀಯ ಕುತೂಹಲ ಮೂಡಿಸಿದೆ. ತಾಂತ್ರಿಕವಾಗಿ ಜೆಡಿಎಸ್‌ನಲ್ಲಿದ್ದರೂ ಮಾನಸಿಕವಾಗಿ ತುಂಬಾ ದೂರ ಸಾಗಿರುವ ಜಿ.ಟಿ.ದೇವೇಗೌಡ ಅವ ರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ವಿವಿಧ ಕಸರತ್ತುಗಳು ನಡೆಯುತ್ತಿವೆ.
ಈ ನಡುವೆ ಜಿಟಿಡಿ ಜೆಡಿಎಸ್‌ನಲ್ಲೇ ಉಳಿಯಲಿದ್ದಾರೆಂದು ಕೆ.ಟಿ. ಶ್ರೀಕಂಠೇಗೌಡ ಮೊನ್ನೆ ಯಷ್ಟೇ ಹೇಳಿಕೆ ನೀಡಿದ್ದರು. ವಾರದ ಹಿಂದೆಯಷ್ಟೇ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಸಹ ಜಿಟಿಡಿ ಪತ್ನಿ ಲಲಿತಾ ಅವರನ್ನು ಭೇಟಿ ಮಾಡಿದ್ದರು. ಶುಕ್ರವಾರ ನಿಖೀಲ್ ಕುಮಾರಸ್ವಾಮಿ ಹಾಗೂ ಹರೀಶ್ ಗೌಡ ಭೇಟಿಯಾಗಿರುವುದು ಕುತೂಹಲ ಹುಟ್ಟುಹಾಕಿದೆ. ಚಾಮುಂಡಿಬೆಟ್ಟಕ್ಕೆ ತೆರಳಿದ ಇಬ್ಬರು ಯುವ ನಾಯ ಕರು ಒಟ್ಟಿಗೆ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ ರಲ್ಲದೆ ಉಭಯಕುಶಲೋಪರಿ ವಿಚಾರಿಸಿದ್ದಾರೆ.
ರಾಜಕೀಯ ಮಾಡಲು ಬಂದಿಲ್ಲ: ನಿಖೀಲ್ ಕುಮಾರ ಸ್ವಾಮಿ ಮಾತನಾಡಿ, ನನ್ನ ಹೊಸ ರೈಡರ್ ಚಿತ್ರ ಕೆಲವೇ ದಿನಗಳಲ್ಲಿ ಬಿಡುಗಡೆಗೆಯಾಗುತ್ತಿದೆ. ಹೀಗಾಗಿ ಚಾಮುಂಡೇಶ್ವರಿ ಅಶೀರ್ವಾದ ಪಡೆಯಲು ಬಂದಿ ದ್ದೇನೆ. ರಾಜ್ಯದ ಜನಕ್ಕೆ ಒಳಿತು ಮಾಡಲಿ ಎಂದು ಬೇಡಿ ಕೊಂಡಿದ್ದೇನೆ. ಯಾವುದೇ ರೀತಿಯ ರಾಜಕೀಯ ಮಾಡಲು ಬಂದಿಲ್ಲ ಎಂದರು.
ನನ್ನ ಹಾಗೂ ಹರೀಶ್ ಗೌಡರ ಸ್ನೇಹ ದೊಡ್ಡದು. ರಾಜಕೀಯ ಹೊರೆತಾಗಿಯೂ ನಮ್ಮ ನಡುವೆ ಉತ್ತಮ ಸ್ನೇಹವಿದೆ. ಮೈಸೂರು ಭಾಗದಲ್ಲಿ ಜಿ.ಡಿ.ಹರೀಶ್‌ಗೌಡ ಯುವ ಶಕ್ತಿಯಾಗಿ ಬೆಳೆದಿದ್ದಾರೆ. ಪಕ್ಷ ಸಂಘಟನೆ ವಿಚಾರಕ್ಕೆ ಬಂದಾಗ ಈ ಕುರಿತು ಉತ್ತರಿಸುತ್ತೇನೆ. ಎಲ್ಲವೂ ಸರಿಯಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಬದಲಾವಣೆಯಾಗಲಿದ್ದು, ಎಲ್ಲ ಸಮಸ್ಯೆಗಳು ಬಗೆಹರಿಯಲಿವೆ.
ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು. ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಮಾತನಾಡಿ, ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ನಾನು ಹಾಗೂ ನಿಖೀಲ್ ಉತ್ತಮ ಸ್ನೇಹಿತರು. ಮೈಸೂರಿಗೆ ಬಂದಾಗ ಅವರನ್ನು ಭೇಟಿ ಮಾಡುತ್ತೇನೆ. ಇದರಲ್ಲಿ ಯವುದೇ ರಾಜಕೀಯ ಇಲ್ಲ. ರಾಜಕೀಯ ಬೆಳವಣಿಗೆಗಳ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಹೇಳಿದರು. ಇದೇ ವೇಳೆ ಬೆಟ್ಟದಲ್ಲಿ ಅಭಿಮಾನಿಗಳು ನಿಖೀಲ್ ಹಾಗೂ ಹರೀಶ್‌ಗೌಡ ಅವರಿಗೆ ಹಾರ ಹಾಕಿ ಸನ್ಮಾನಿಸಿ ಅಭಿನಂದಿಸಿದರು.
ಇದನ್ನೂ ಓದಿ:- ಡ್ರೋಣ್ ಮೂಲಕ ಕೀಟನಾಶಕ ಸಿಂಪಡಣೆ: ಕೆಕೆಆರ್ ಡಿಬಿಯಿಂದ ಪ್ರಾಯೋಗಿಕ ಜಾರಿ
ದೊಡ್ಡ ಗೌಡರ ಮಾಸ್ಟರ್ ಪ್ಲ್ರಾನ್– ರಾಜಕೀಯ ಮೂಲಗಳ ಪ್ರಕಾರ, ಹಳೆ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸಿರುವ ರಾಜಕೀಯ ಯುವ ನಾಯಕರಾದ ಪಿರಿಯಾಪಟ್ಟಣ ಶಾಸಕ ಕೆ.ಮಹದೇವು ಅವರ ಪುತ್ರ ಹಾಗೂ ಮೈಮುಲ್ ಅಧ್ಯಕ್ಷ ಪ್ರಸನ್ನ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಹಾಗೂ ಮಂಡ್ಯ ಮಾಜಿ ಸಂಸದ ಪುಟ್ಟರಾಜು ಅವರ ಪುತ್ರ ಶಿವರಾಜು ಜತೆಗೂಡಿ ವಿಶೇಷ ಪೂಜೆ ನಡೆಸಿದ್ದಾರೆ. ಹೀಗೆ ದೊಡ್ಡವರ ಮನಸ್ತಾಪಗಳ ಮಧ್ಯೆ ಯುವ ನಾಯಕರನ್ನು ಒಗ್ಗೂಡಿಸಿ ಮುಂಬರುವ ಚುನಾವಣೆಗೆ ಅಚ್ಚರಿ ಕಾರ್ಯತಂತ್ರ ರೂಪಿಸುವ ದಿಸೆಯಲ್ಲಿ ಇಂತಹ ಪ್ರಯತ್ನವನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಡೆಸಿದ್ದಾರೆ ಎನ್ನುವುದು ರಾಜಕೀಯ ನಾಯಕರ ಮಾತಾಗಿದೆ.