Advertisement
ನಿಖಿಲ್ ನಾಮಪತ್ರ ಸಲ್ಲಿಕೆ ವಿಚಾರವನ್ನು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಚಿವ ಪುಟ್ಟರಾಜು ಅವರು ಮಾಹಿತಿ ನೀಡಿದರು. ನಾಮಪತ್ರ ಸಲ್ಲಿಸುವ ದಿನದಂದು ತಮ್ಮ ಯುವ ನಾಯಕನನ್ನು ಬೆಂಬಲಿಸಿ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು 2 ಲಕ್ಷ ಜೆಡಿಎಸ್ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ತೆರಳಿ ನಿಖಿಲ್ ಅವರು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಭಾಗವಹಿಸಲಿದ್ದಾರೆ ಎಂದು ಪುಟ್ಟರಾಜು ತಿಳಿಸಿದರು.
ಇಂದಿನ ಈ ಪತ್ರಿಕಾಗೋಷ್ಠಿಯಲ್ಲಿ ನಿಖಿಲ್ ಕುಮಾರಸ್ವಾಮಿಯವರೂ ಹಾಜರಿದ್ದರು. ಈ ಹಿಂದೆ ಜೆಡಿಎಸ್ ನ ಸುರೇಶ್ ಗೌಡ ಅವರು ನಿಖಿಲ್ ಮಂಡ್ಯದ ಅಳಿಯನಾಗುವವರು ಎಂಬರ್ಥದ ಹೇಳಿಕೆಯೊಂದನ್ನು ನೀಡಿದ್ದರು. ಈ ಕುರಿತಾಗಿ ಪತ್ರಕರ್ತರು ಇಂದು ನಿಖಿಲ್ ಅವರನ್ನು ಪ್ರಶ್ನಿಸಿದಾಗ, ‘ನನಗೆ ಮದುವೆ ಮಾಡಿಸಲು ಮನೆಯಲ್ಲಿ ಹೆಣ್ಣು ಹುಡುಕುತ್ತಿದ್ದಾರೆ. ಮಂಡ್ಯದ ಹುಡುಗಿಯೇ ಸಿಕ್ಕಿದ್ರೆ ನಾನು ಈ ಊರಿನ ಅಳಿಯನಾಗುತ್ತೇನೆ’ ಎಂದು ನಗುತ್ತಲೇ ಉತ್ತರಿಸಿದರು.