Advertisement

Nikhil Kumaraswamy: ಕಾರ್ಯಕರ್ತನಿಗೆ ಟಿಕೆಟ್‌ ಸಿಕ್ಕಿದರೆ ನನಗೆ ಸಿಕ್ಕಂತೆ

11:46 PM Oct 23, 2024 | Team Udayavani |

ಬೆಂಗಳೂರು: ಸಿ.ಪಿ. ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆ ಅಚ್ಚರಿಯ ವಿಷಯವೇನಲ್ಲ. ಅಧಿಕಾರ ಎಲ್ಲಿ ಸಿಗುತ್ತದೆಯೋ ಯೋಗೇಶ್ವರ್‌ ಅಲ್ಲಿಗೆ ಹೋಗುತ್ತಾರೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದರು.

Advertisement

ಅತ್ತ ಯೋಗೇಶ್ವರ್‌ ಕಾಂಗ್ರೆಸ್‌ ಸೇರುತ್ತಿದ್ದಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ನಿವಾಸಕ್ಕೆ ಆಗಮಿಸಿದ ನಿಖಿಲ್‌, ಕೆಲ ಹೊತ್ತು ಮಾತುಕತೆ ನಡೆಸಿದರು.

ಅಜ್ಜಿ-ತಾತನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು. ಬಳಿಕ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಿಗೆ ಅಧಿಕಾರ ಸಿಕ್ಕಿದರೆ ಅದು ನಿಖೀಲ್‌ ಕುಮಾರಸ್ವಾಮಿಗೆ ಸಿಕ್ಕಂತೆ ಎನ್ನುವ ಮೂಲಕ ತಮ್ಮ ಸ್ಪರ್ಧೆಯ ಸಾಧ್ಯತೆಗಳನ್ನು ತಳ್ಳಿ ಹಾಕಿದರು.

ನಮ್ಮಿಂದ ಯಾವುದೇ ತಪ್ಪಾಗಿಲ್ಲ
ಯೋಗೇಶ್ವರ್‌ ಅವರಿಗೆ 25 ವರ್ಷದ ರಾಜಕೀಯ ಅನುಭವವಿದೆ. ಅವರು ಒಂದು ಬದ್ಧತೆ ಇಟ್ಟುಕೊಂಡು ರಾಜಕೀಯ ಮಾಡಿಲ್ಲ. ನಮ್ಮಿಂದ ಯಾವ ತಪ್ಪೂ ಆಗಿಲ್ಲ. ಬಿಜೆಪಿ ನಾಯಕರ ಕಾರಣಕ್ಕೂ ಅವರು ಪಕ್ಷ ಬಿಡುವ ವಿಚಾರ ಮಾಡಿಲ್ಲ. ಎಲ್ಲಿ ಅಧಿಕಾರ ಸಿಗುತ್ತದೋ ಅಲ್ಲಿಗೆ ಜಂಪ್‌ ಆಗುತ್ತಾರೆ. ಕಳೆದ ಎರಡು ತಿಂಗಳಿನಿಂದ ಯೋಗೇಶ್ವರ್‌ ಅವರು ಕಾಂಗ್ರೆಸ್‌ ಸಂಪರ್ಕದಲ್ಲಿದ್ದರು ಎಂದು ದೂರಿದರು.

ಡಿ.ಕೆ. ಸುರೇಶ್‌ ಏಕೆ ಧೈರ್ಯ ಮಾಡಲಿಲ್ಲ?
ಕಾಂಗ್ರೆಸ್‌ ಬಳಿ 136 ಶಾಸಕರಿದ್ದಾರೆ. ಹೆಸರಿಗೆ ರಾಷ್ಟ್ರೀಯ ಪಕ್ಷ. ಆದರೆ, ಅವರ ಬಳಿ ಅಭ್ಯರ್ಥಿ ಇಲ್ಲ. ಆಪರೇಷ‌ನ್‌ ಹಸ್ತ ಮಾಡಿದರು. ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್‌ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಸಹೋದರ ಡಿ.ಕೆ.ಸುರೇಶ್‌ ಸ್ಪರ್ಧೆ ಮಾಡುತ್ತಾರೆ ಎಂದು ಕಥೆ ಕಟ್ಟಲಾಯಿತು. ಅವರೇಕೆ ಧೈರ್ಯ ಮಾಡಲಿಲ್ಲ? ಈಗ ಯೋಗೇಶ್ವರ್‌ ಅವರಿಗೆ ಮಣೆ ಹಾಕಿರುವುದು ಆ ಪಕ್ಷದ ದುಸ್ಥಿತಿಗೆ ಹಿಡಿದ ಕನ್ನಡಿ ಎಂದು ದೂಷಿಸಿದರು.

Advertisement

ನಮ್ಮ ಹಾಗೂ ಎನ್‌ಡಿಎ ಸಂಬಂಧಕ್ಕೆ ಯಾವುದೇ ಚ್ಯುತಿ ಬರಬಾರದು. ನಮ್ಮಿಂದ ಯಾವುದೇ ಪ್ರಶ್ನೆ ಎದುರಾಗಬಾರದು. ಯಾವುದೇ ಉದ್ವೇಗಕ್ಕೆ ಒಳಗಾಗಿ ಸಾರ್ವಜನಿಕ ಚರ್ಚೆಗೆ ತೀರ್ಮಾನ ಮಾಡಬಾರದು ಎಂದು ದೇವೇಗೌಡರು ಹೇಳಿದ್ದಾರೆ. ಸೋಲು-ಗೆಲುವು ನಿರ್ಧರಿಸುವುದು ಚನ್ನಪಟ್ಟಣದ ಪ್ರಬುದ್ಧ ಜನರು.
-ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next