Advertisement

ನಿಖಿಲ್‌ ಈಗ ಬಾಸ್ಕೆಟ್‌ ಬಾಲ್‌ ಪ್ಲೇಯರ್‌

10:12 AM Feb 08, 2020 | Lakshmi GovindaRaj |

ಕೆಲ ದಿನಗಳ ಹಿಂದಷ್ಟೇ ನಟ ಕಂ ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಅದ್ಧೂರಿಯಾಗಿ ತಮ್ಮ ಮೂವತ್ತನೇ ವರ್ಷದ ಬರ್ತ್‌ಡೇಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದು ನಿಮಗೆ ನೆನಪಿರಬಹುದು. ಇದೇ ವೇಳೆ ನಿಖಿಲ್‌ ಕುಮಾರ್‌ ಮುಂಬರುವ ದಿನಗಳಲ್ಲಿ ನಾಯಕನಾಗಿ ಅಭಿನಯಿಸುತ್ತಿರುವ ನಾಲ್ಕು ಚಿತ್ರಗಳನ್ನು ಕೂಡ ಅದರ ನಿರ್ಮಾಪಕರು ಮತ್ತು ನಿರ್ದೇಶಕರು ಅಧಿಕೃತವಾಗಿ ಅನೌನ್ಸ್‌ ಮಾಡಿದ್ದರು.

Advertisement

ಆ ನಾಲ್ಕು ಚಿತ್ರಗಳ ಪೈಕಿ ಈಗ ಒಂದು ಚಿತ್ರ ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಿದೆ. ಅಂದಹಾಗೆ, “ಜಾಗ್ವಾರ್‌’, “ಕುರುಕ್ಷೇತ್ರ’, “ಸೀತಾರಾಮ ಕಲ್ಯಾಣ’ ಚಿತ್ರದ ಬಳಿಕ ನಿಖಿಲ್‌ ಕುಮಾರ್‌ ಅಭಿನಯದ ನಾಲ್ಕನೇ ಚಿತ್ರ ಇದಾಗಿದ್ದು, ಚಿತ್ರಕ್ಕೆ ಇನ್ನೂ ಟೈಟಲ್‌ ಫಿಕ್ಸ್‌ ಆಗಿಲ್ಲ. ಬಸವನಗುಡಿಯ ಪುರಾಣ ಪ್ರಸಿದ್ಧ ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ, ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದೆ.

“ಲಹರಿ ಮ್ಯೂಸಿಕ್‌’ ಬ್ಯಾನರ್‌ನಲ್ಲಿ ಚಂದ್ರು ಮನೋಹರ್‌ ನಿರ್ಮಿಸುತ್ತಿರುವ ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ. ತೆಲುಗಿನಲ್ಲಿ “ಒಕ ಲೈಲಾ ಕೋಸಂ’, “ಗುಂಡೇ ಜಾರಿ ಗಲ್ಲಂತಾಯಿಂದಿ’ ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್‌ ಕುಮಾರ್‌ ಕೊಂಡ ಈ ದ್ವಿಭಾಷಾ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ನಿಖಿಲ್‌ ಕುಮಾರ್‌ಗೆ ಇಬ್ಬರು ನಾಯಕಿಯರು ಜೋಡಿಯಾಗಿ ತೆರೆಮೇಲೆ ಹೆಜ್ಜೆ ಹಾಕಲಿದ್ದಾರೆ.

ಕಾಶ್ಮೀರ ಪರದೇಶಿ ಹಾಗೂ ಸಂಪದಾ ಆಯ್ಕೆಯಾಗಿದ್ದಾರೆ. ಉಳಿದಂತೆ ಹಿರಿಯ ನಟ ದತ್ತಣ್ಣ, ರಾಜೇಶ್‌ ನಟರಂಗ, ಶಿವರಾಜ್‌ ಕೆ.ಆರ್‌ ಪೇಟೆ, ಬೇಬಿ ಪ್ರಾಣ್ಯ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಕೆಲವು ಪಾತ್ರಗಳಿಗೆ ತೆಲುಗು ಮತ್ತು ಕನ್ನಡ ಪ್ರಸಿದ್ಧ ಕಲಾವಿದರನ್ನು ಕರೆತರುವ ಪ್ರಯತ್ನ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಚಿತ್ರದಲ್ಲಿ ಅಭಿನಯಿಸುವ ಉಳಿದ ಕಲಾವಿದರ ಹೆಸರು ಕೂಡ ಹೊರಬೀಳುವ ಸಾಧ್ಯತೆಯಿದೆ.

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ನಿಖಿಲ್‌ ಕುಮಾರ್‌, “ಇದೊಂದು ಪಕ್ಕಾ ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾ. ಒಬ್ಬ ಬಾಸ್ಕೇಟ್‌ ಬಾಲ್‌ ಪ್ಲೇಯರ್‌ ಲೈಪ್‌ನಲ್ಲಿ ಏನೇನು ನಡೆಯುತ್ತದೆ ಅನ್ನೋದರ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ಇದರಲ್ಲಿ ನನ್ನದು ಮಧ್ಯಮ ವರ್ಗದ ಬಾಸ್ಕೇಟ್‌ ಬಾಲ್‌ ಪ್ಲೇಯರ್‌ ಪಾತ್ರ. ಇದರಲ್ಲಿ ಲವ್‌, ಆ್ಯಕ್ಷನ್‌, ಫ್ಯಾಮಿಲಿ ಸೆಂಟಿಮೆಂಟ್‌, ಎಮೋಶನ್ಸ್‌ ಎಲ್ಲವೂ ಇರಲಿದೆ.

Advertisement

ಚಿತ್ರದ ಕ್ಯಾರೆಕ್ಟರ್‌ಗಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಇಲ್ಲಿಯವರೆಗೆ ಮಾಡಿದ ಸಿನಿಮಾಗಳಿಗಿಂತ ಡಿಫ‌ರೆಂಟ್‌ ಲುಕ್‌ ಈ ಸಿನಿಮಾದಲ್ಲಿದೆ. ಇದಕ್ಕಿಂತ ಹೆಚ್ಚಾಗಿ ಈಗಲೇ ಸಿನಿಮಾದ ಬಗ್ಗೆ ಹೆಚ್ಚೇನು ಗುಟ್ಟು ಬಿಟ್ಟುಕೊಡಲಾರೆ’ ಎಂದರು. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿಜಯ್‌ ಕುಮಾರ್‌ ಕೊಂಡ, “ಚಿತ್ರದ ಕಥೆ ಕನ್ನಡ ಮತ್ತು ತೆಲುಗು ಎರಡೂ ಭಾಷೆಯ ಆಡಿಯನ್ಸ್‌ಗೂ ತಲುಪುವಂತಿದೆ.

ಹಾಗಾಗಿ ಈ ಸಿನಿಮಾವನ್ನು ಕನ್ನಡ, ತೆಲುಗು ಎರಡೂ ಭಾಷೆಯಲ್ಲೂ ಮಾಡುತ್ತಿದ್ದೆವೆ. ಕನ್ನಡ, ತೆಲುಗು ಚಿತ್ರರಂಗದ ಪ್ರಸಿದ್ದ ಕಲಾವಿದರು, ತಂತ್ರಜ್ಞರು ಸಿನಿಮಾದಲ್ಲಿರುತ್ತಾರೆ. ಶೀಘ್ರದಲ್ಲಿಯೇ ಈ ಸಿನಿಮಾದ ಬಗ್ಗೆ ಇನ್ನುಳಿದ ವಿಷಯಗಳನ್ನು ತಿಳಿಸಲಿದ್ದೇವೆ’ ಎಂದರು. “ಲಹರಿ ಮ್ಯೂಸಿಕ್‌’ ಬ್ಯಾನರ್‌ ಪರವಾಗಿ ಮಾತನಾಡಿದ ಲಹರಿ ವೇಲು, “ಮಹಾಕ್ಷತ್ರಿಯ’ ಚಿತ್ರದ ನಂತರ ಮತ್ತೆ ತಮ್ಮ ಸಂಸ್ಥೆಯಿಂದ ಈ ಚಿತ್ರ ನಿರ್ಮಾಣವಾಗುತ್ತಿದ್ದು,

ಪ್ರೇಕ್ಷಕರಿಗೆ ಇಷ್ಟವಾಗುವಂಥ ಒಂದೊಳ್ಳೆ ಚಿತ್ರವನ್ನು ತೆರೆಗೆ ತರುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಒಟ್ಟಾರೆ ಕಳೆದ ಲೋಕಸಭಾ ಚುನಾವಣೆಯ ನಂತರ ಚಿತ್ರರಂಗಕ್ಕಿಂತ ಹೆಚ್ಚಾಗಿ ರಾಜಕೀಯ ರಂಗದಲ್ಲೇ ಸಕ್ರಿಯವಾಗಿ, ಸದಾ ಸುದ್ದಿಯಾಗುತ್ತಿದ್ದ ನಿಖಿಲ್‌ ಕುಮಾರಸ್ವಾಮಿ, ಇನ್ಮುಂದೆ ಮತ್ತೆ ಚಿತ್ರರಂಗಕ್ಕೆ ಬರುತ್ತಾರಾ ಅಥವಾ ರಾಜಕೀಯದಲ್ಲೇ ನಿರತರಾಗುತ್ತಾರಾ ಎಂಬ ಪ್ರಶ್ನೆಗಳಿಗೆ ಈಗ ಭಾಗಶಃ ಉತ್ತರ ಸಿಕ್ಕಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next