Advertisement

ಗರ್ಭ ಗುಡಿ ಸಂಸ್ಕೃತಿಯಿಂದ ಹೊರಬನ್ನಿ: ನಿಜಗುಣಾನಂದ ಮಹಾಸ್ವಾಮಿ

06:04 PM May 23, 2022 | Team Udayavani |

ರಬಕವಿ-ಬನಹಟ್ಟಿ : ಅನುಕರಣೆಯಂಥ ಅಪಾಯಕಾರಿ ಭಾಷಣಕಾರರು ಬೇಕಿಲ್ಲ ಅನುಭಾವಿಕ ಭಾಷಣಕಾರರು ಬೇಕಿದೆ. ಕಾಣುವ ಮನುಷ್ಯರನ್ನೇ ಪ್ರೀತಿಸದ ನಾವು ದೇವರನ್ನು ಅದೇಗೆ ಪ್ರೀತಿಸುತ್ತೇವೆ? ಅಧಿಕಾರಕ್ಕಾಗಿ ಬಂದವರು ಅಧಿಕಾರ ಮಾತ್ರ ನಡೆಸುತ್ತಿದ್ದಾರೆ ವಿನಃ ಮನುಷ್ಯತ್ವಕ್ಕಾಗಿ ನಡೆಸುತ್ತಿಲ್ಲ. ಗರ್ಭ ಗುಡಿ ಸಂಸ್ಕೃತಿಯಿಂದ ನಾವೆಲ್ಲರೂ ಹೊರ ಬಂದಾಗ ಮಾತ್ರ ಬುದ್ಧ-ಬಸವ-ಅಂಬೇಡ್ಕರ್ ಮಾರ್ಗದರ್ಶನದ ಬೆಳಕು ಇಡೀ ಜಗತ್ತಿಗೆ ಬೆಳಗುವುದು, ಅಲ್ಲಿಯವರೆಗೂ ಕತ್ತಲೇಯೇ ಎಂದು ಬೆಳಗಾವಿ ಜಿಲ್ಲೆಯ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಮಹಾಸ್ವಾಮಿಗಳು ಹೇಳಿದರು.

Advertisement

ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಅಹಿಂದ ಸೌಹಾರ್ದ ಸಂಘದ ಆಶ್ರಯದಲ್ಲಿ ಜರುಗಿದ ಬಸವೇಶ್ವರ ಹಾಗು ಅಂಬೇಡ್ಕರ್ ಜಯಂತಿ ಅಂಗವಾಗಿ ಜನಜಾಗೃತಿ ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಅಭಿಮಾನ, ಅನುಮಾನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅನುಭಾವದಿಂದ ಮಾತ್ರ ಸಮಾನತೆ ಜೀವನ ನಡೆಯುವದು. ಸಮಯವನ್ನು ಕೊಲೆ ಮಾಡದೆ ಸದ್ಬಳಕೆ ಮಾಡಿಕೊಳ್ಳಿ. ಜಾತಿಗೆ ಸೀಮಿತವಾಗಿ ವ್ಯಕ್ತಿ ಗುರ್ತಿಸುವದಲ್ಲ. ಬುದ್ಧ-ಬಸವ-ಅಂಬೇಡ್ಕರ್ ಉತ್ತರ, ಮಧ್ಯ ಹಾಗು ದಕ್ಷಿಣ ಭಾರತಾದ್ಯಂತ ಸಮಾನತೆಯನ್ನು ಸಾರಿದವರು. ನಡೆ-ನುಡಿ ಸಿದ್ಧಾಂತವಾದಲ್ಲಿ ಶಾಸ್ತ್ರ, ಶರಣ, ದೇವರು, ಸ್ವಾಮೀಗಳ ಆಶೀರ್ವಚನಗಳೇ ಬೇಡ ಇಲ್ಲವಾದಲ್ಲಿ ಭಿಕ್ಷುಕ ಮಾನವನಂತೆ ಬದುಕಾಗುವುದು ಎಂದರು.

ನಿಸರ್ಗದಿಂದಲೇ ಎಲ್ಲವೂ ಇದ್ದು, ಇದರಿಂದಲೇ ಜಗತ್ತು ನಿಂತಿದೆ. ಎಲ್ಲೂ ಕಾಣದ ವಸ್ತುಗಳನ್ನು ಹುಡುಕುವ ಬದಲಾಗಿ ಕಣ್ಮುಂದೆಯಿರುವ ವಸ್ತುಗಳನ್ನು ಪ್ರೀತಿಸಿದಾಗ ಅದರಲ್ಲಿನ ಆನಂದವೇ ವಿಶೇಷವೆಂದರು.

ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ ಅಂಬೇಡ್ಕರ್-ಬುದ್ಧ-ಬಸವಣ್ಣವರ ಬಗ್ಗೆ ಪ್ರತಿಯೊಬ್ಬರು ಓದಿ ಅವರ ವಿಚಾರಗಳನ್ನು ಆಚರಣೆಗೆ ತರುವ ಮೂಲಕ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಯುವಜನತೆಯ ಪಾತ್ರ ಮುಖ್ಯವಾಗಿದೆ ಎಂದರು.

Advertisement

ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಇಂದಿಗೂ ಬುದ್ಧ, ಬಸವ, ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿಯೇ ದೇಶ ಮುನ್ನಡೆಯುತ್ತಿದೆ. ಸಮಾನತೆ ಹಾಗು ದಾರಿದ್ರ್ಯ ಹೋಗಲಾಡಿಸುವ ಮೂಲಕ ಜಾತಿ ಸಂಸ್ಕೃತಿಯನ್ನು ಹೋಗಲಾಡಿಸುವಲ್ಲಿ ಮುಂಚೂಣಿ ಪಾತ್ರದ ಮೂಲಕ ನಾಂದಿ ಹಾಡಿದವರು ಎಂದರು.

ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ಸಂಸ್ಕಾರ, ಸಂಸ್ಕೃತಿ ಹಾಗು ದೇಶಪ್ರೇಮ ಅಳವಡಿಸಿಕೊಂಡ ಸದೃಢ ದೇಶಕ್ಕೆ ಸಬಲರಾಗಬೇಕು, ಜಾಗೃತಿಯನ್ನು ರಾಜಕೀಯ ಭಾಷಣದ ಮೂಲಕ ಸಾಧ್ಯವಾಗದು. ಅದೊಂದು ಜನರ ಮಧ್ಯದಲ್ಲಿಯೇ ಮಹತ್ವದ ಪಾತ್ರ ವಹಿಸಬೇಕು. ಶ್ವೇತ ಬಣ್ಣದಿಂದ ಕೂಡಿರುವ ಕೇಸರಿ ಬಣ್ಣವು ಧರ್ಮ ಎತ್ತಿ ಹಿಡಿಯಬೇಕು ಹೊರತು ನಾಶ ಮಾಡುವದಲ್ಲ. ಶಾಂತಿಯ ಸಂಕೇತವಾಗಿರುವ ಶ್ವೇತ ವರ್ಣವು ಎಲ್ಲ ಬಣ್ಣಗಳಲ್ಲಿಯೂ ಸೇರುತ್ತದೆ. ಅದರಂತೆ ಶಾಂತಿಯ ಸಂಕೇತವಾಗಿ ದೇಶ ಮುನ್ನಡೆಬೇಕೆಂದರು.

ಕಕಮರಿಯ ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿ ಮಾತನಾಡಿ, ಸ್ವಾರ್ಥ ಸಮಾಜದಲ್ಲಿರುವ ಸಂದರ್ಭದಲ್ಲಿ ನಿಸ್ವಾರ್ಥ ಸಮಾಜ ಅಭಿವೃದ್ಧಿಗೆ ಅಹಿಂದ ಸಂಘಟನೆ ಅನಿವಾರ್ಯವಾಗಿದೆ. ಜೀವನದ ಗುರಿ ಮುಟ್ಟುವ ಕಾಯಕದಲ್ಲಿ ಮಾನವೀಯತೆ ಹಿರಿದಾದುದು ಎಂದರು.

ಹೊಸೂರಿನ ಸಂಗಮೇಶ್ವರ ಮಹಾಸ್ವಾಮಿಗಳು, ಜಕನೂರಿನ ಡಾ. ಮಾದುಲಿಂಗ ಮಹಾರಾಜರು, ಜಮಖಂಡಿಯ ಕೃಷ್ಣಾ ಅವಧೂತ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿದರು.

ಡಾ. ಪದ್ಮಜೀತ ನಾಡಗೌಡ ಪಾಟೀಲ, ಡಾ. ಎ.ಆರ್. ಬೆಳಗಲಿ, ಸಂಗಮೇಶ ನಿರಾಣಿ, ಭೀಮಶಿ ಮಗದುಮ್, ಶಂಕರ ಸೊರಗಾಂವಿ, ಸಿದ್ದು ಕೊಣ್ಣೂರ, ಮಲ್ಲಿಕಾರ್ಜುನ ಹುಲಗಬಾಳಿ, ರಾಜು ಅಂಬಲಿ, ದುಂಡಪ್ಪ ಕರಿಗಾರ, ಮಲ್ಲು ಬಾನಕಾರ, ಈರಪ್ಪ ಕಾಂಬಳೆ, ರಾಘವೇಂದ್ರ ಜಿಡ್ಡಿಮನಿ, ಪ್ರಶಾಂತ ನಾಯಕ, ಶಾನೂರ ಹಿತ್ತಲಮನಿ ಸೇರಿದಂತೆ ಅನೇಕರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next