ಕಲಬುರಗಿ: ಬಹು ದಿನಗಳಿಂದ ಇಲ್ಲಿನ ವಿಮಾನ ನಿಲ್ದಾಣದಿಂದ ನಿರೀಕ್ಷಿಸಲಾಗುತ್ತಿದ್ದ ರಾತ್ರಿ ವಿಮಾನಯಾನ ಸಂಚಾರ ಸೇವೆಗೆ ಈಗ ಕಾಲ ಕೂಡಿ ಬರುತ್ತಿದ್ದು, ಇದೇ ಫೆ. 22ರಂದು ಪ್ರಾಯೋಗಿಕವಾಗಿ ರಾತ್ರಿ ವಿಮಾನ ಸಂಚಾರ ಶುರುವಾಗಲಿದೆ.
ಫೆಬ್ರವರಿ 22 ರಂದು Alliance Airlines ರವರಿಂದ ಸಾಯಂಕಾಲ 6:45 ಗಂಟೆ ಬೆಂಗಳೂರಿನಿಂದ ಹೊರಟು ರಾತ್ರಿ 8 ಗಂಟೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬರಲಿದೆ. ತದನಂತರ ಇದೇ ವಿಮಾನ ರಾತ್ರಿ 8:45 ಗಂಟೆಗೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ರಾತ್ರಿ 10ಕ್ಕೆ ತಲುಪಲಿದೆ.
ಫೆ.22 ರಿಂದ Alliance Airlines ನವರು ಪ್ರಾಯೋಗಿಕವಾಗಿ ಪ್ರತಿ ಗುರುವಾರ ರಾತ್ರಿ ವಿಮಾನ ಸೇವೆ ಪ್ರಾರಂಭ ಮಾಡುತ್ತಿದ್ದು, ಹಾಗೆಯೇ ಮುಂಬರುವ ದಿನಗಳಲ್ಲಿ ಪ್ರತಿದಿನ ಸೇವೆ ಪ್ರಾರಂಭವಾಗಲಿದೆ.
ಕಲಬುರಗಿಯಿಂದ ರಾತ್ರಿ ವಿಮಾನ ಸಂಚಾರ ಪ್ರಾರಂಭವಾಗಬೇಕೆಂದು ಬಹುದಿನಗಳ ಬೇಡಿಕೆ ಈಗ ಈಡೇರಿದಂತಾಗಿದೆ. ಅದಲ್ಲದೇ ದೇಶದ ವಿವಿಧಡೆ ವಿಮಾನಯಾನ ಆರಂಭಿಸುವ ನಿಟ್ಟಿನಲ್ಲಿ ಈ ಮೈಲಿಗಲ್ಲು ಸಾಬೀತು ಆಗಲಿದೆ.
ರಾಜ್ಯದ ಎರಡನೇ ಅತಿ ಉದ್ದದ ರನ್ ವೇ ಹೊಂದಿರುವ ಕಲಬುರಗಿ ವಿಮಾನ ನಿಲ್ದಾಣದಿಂದ 2019ರ ನವೆಂಬರ್ 23 ರಿಂದ ವಿಮಾನ ಹಾರಾಟ ಶುರುವಾಗಿದ್ದು, ವರ್ಷ ಇಲ್ಲವೇ ಎರಡು ವರ್ಷದೊಳಗೆ ರಾತ್ರಿ ವಿಮಾನ ಹಾರಾಟ ಶುರುವಾಗುವುದು ಎಂದು ನಿರೀಕ್ಷಿಸಲಾಗಿತ್ತು. ಈಗ ಕನಸು ಸಾಕಾರಗೊಂಡಂತಾಗಿದೆ.
ಸತತ ಪ್ರಯತ್ನ ಫಲವಾಗಿ ಕೊನೆಗೂ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ವಿಮಾನ ಹಾರಾಟ ಶುರುವಾಗುತ್ತಿರುವುದಕ್ಕೆ ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಹರ್ಷ ವ್ಯಕ್ತಪಡಿಸಿದ್ದಾರೆ.