ಬೆಂಗಳೂರು: ಮನೆಯಲ್ಲಿ ಅಕ್ರಮವಾಗಿ ಮಾದಕ ವಸ್ತು ಸಂಗ್ರಹಿಸಿದ್ದ ಆರೋಪದ ಮೇಲೆ ಐವರು ನೈಜಿರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಝಾಗೋ ಕಾನ್ಸ್‌ಟ್ಯಾಂಟ್ (32), ಎಬಿಲ್ ಇಫಿಕೂ (53), ಉಡುಗಾಲೋ ಅಗೂಸ್ಟಿನ್ ಅರೈನ್ (29), ಇಬುಕ್ ಇಮ್ಯೂನಲ್ (37) ಪೀಟರ್ (26) ಬಂಧಿತರು.
ಆರೋಪಿಗಳಿಂದ 170 ಗ್ರಾಂ. ಕೊಕೇನ್, 17 ಮೊಬೈಲ್, 1 ಲ್ಯಾಪ್‌ಟಾಪ್, ಒಂದು ಪಾಸ್‌ಪೋರ್ಟ್, ಪೊರ್ಟೆಬಲ್ ತೂಕದ ಯಂತ್ರ, ಪೊರ್ಟೆಬಲ್ ಡಿ-ಲಿಂಕ್, ಒಂದು ಹೋಂಡಾ ಆಕ್ಟೀವಾ ಸೇರಿದಂತೆ 18 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮುಂಬೈ, ಹೈದ್ರಾಬಾದ್ ಹಾಗೂ ವಿದೇಶಗಳಿಂದ ಅಕ್ರಮವಾಗಿ ಬರುತ್ತಿದ್ದ ಕೊಕೇನನ್ನು ಮೆನೆಯಲ್ಲಿ ಸಂಗ್ರಹಿಸಿಟ್ಟು, ಬಳಿಕ ಅದನ್ನು ಸಣ್ಣ ಪೊಟ್ಟಣಗಳಲ್ಲಿ ತುಂಬಿ, ವಿದ್ಯಾರ್ಥಿಗಳು ಹಾಗೂ ಮಾದಕ ವ್ಯಸನಿಗಳಿಗೆ ಪ್ರತಿ ಗ್ರಾಂಗೆ 5ರಿಂದ 8 ಸಾವಿರ ರೂ.ಗೆ ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಝಾಗೋ ಕಾನ್ಸ್‌ಟ್ಯಾಂಟ್ ಮತ್ತು ನೈಜಿರಿಯಾದ ಎಬಿಲ್ ಇಫಿಕೂನನ್ನು ಹೆಣ್ಣೂರು ಠಾಣೆ ವ್ಯಾಪ್ತಿಯ ವಡ್ಡರಪಾಳ್ಯದ ಬಾಡಿಗೆ ಮನೆಯಲ್ಲಿ ಹಾಗೂ ಉಡುಗಾಲೋ ಅಗೂಸ್ಟಿನ್ ಅರೈನ್, ಇಬುಕ್ ಇಮ್ಯೂನಲ್, ಪೀಟರ್‌ನನ್ನು ರಾಮಮೂರ್ತಿನಗರ ಠಾಣೆ ವ್ಯಾಪ್ತಿಯ ಕೃಷ್ಣಪ್ಪ ಲೇಔಟ್‌ನ ಮನೆಯೊಂದರಲ್ಲಿ ಬಂಧಿಸಲಾಗಿದೆ.
ಆರೋಪಿಗಳು ವಾಣಿಜ್ಯ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದು, ಈ ಪೈಕಿ ಎಬಿಲ್ ಇಫಿಕೂ ಮತ್ತು ಉಡುಗಾಲೋ ವೀಸಾ ಅವಧಿ 2015ರ ನವೆಂಬರ್‌ನಲ್ಲೇ ಅಂತ್ಯವಾಗಿದ್ದು, ಅಕ್ರಮವಾಗಿ ನೆಲೆಸಿದ್ದಾರೆ. ಇನ್ನು ಝಾಗೋ ಕಾನ್ಸ್‌ಟ್ಯಾಂಟ್ ಅರೈನ್ ಈ ಹಿಂದೆ ಮಾದಕ ವಸ್ತು ಮಾರಾಟ ಆರೋಪದಲ್ಲಿ ಬಂಧಕ್ಕೊಳಗಾಗಿ ಜಾಮೀನು ಪಡೆದು ಹೊರಬಂದಿದ್ದಾನೆ. ಈತನ ಬಳಿ ಪಾಸ್‌ಪೋರ್ಟ್ ಇಲ್ಲ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಈ ಮೊದಲು ಮಾದಕ ವಸ್ತು ಮಾರಾಟಗಾರರನ್ನು ಗುರಿಯಾಗಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಕಾರ್ಯಾಚರಣೆ ಮಾರ್ಗ ಬದಲಿಸಿದ್ದು, ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟ ವ್ಯಕ್ತಿಗಳ ಮನೆ ಮೇಲೇ ದಾಳಿ ನಡೆಸಲಾಗಿದೆ. ಐವರು ಆರೋಪಿಗಳು ನಕಲಿ ದಾಖಲೆಗಳನ್ನು ನೀಡಿ ಸಿಮ್‌ಗಳನ್ನು ಖರೀದಿ ಮಾಡಿ ಮಾರಾಟಗಾರರನ್ನು ಸಂಪರ್ಕಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಈ ಹಿಂದೆ ಮಾದಕ ವಸ್ತು ಮಾರಾಟದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನೈಜಿರಿಯಾ ಅಥವಾ ವಿದೇಶಿ ಪ್ರಜೆಗಳ ಮಾಹಿತಿ ಆಧರಿಸಿ, ಮಾದಕ ವಸ್ತುವನ್ನು ಮನೆಯಲ್ಲಿ ದಾಸ್ತಾನು ಮಾಡಿದ್ದ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ. ಜತೆಗೆ ವೀಸಾ ಅವಧಿ ಮುಗಿದರೂ ನಗರದಲ್ಲಿ ನೆಲೆಸಿರುವ ವಿದೇಶಿಗಳ ಪ್ರಜೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.