ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ನೀರಸ ವಹಿವಾಟಿನ ಪರಿಣಾಮ ಶುಕ್ರವಾರವೂ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 136.69 ಅಂಕಗಳಷ್ಟು ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ.
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 136.69 ಅಂಕ ಕುಸಿತವಾಗಿದ್ದು, 52,793.62 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 25.80 ಅಂಕಗಳಷ್ಟು ಇಳಿಕೆಯಾಗಿದ್ದು, 15,782.20 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.
ಹಿಂಡಲ್ಕೋ ಇಂಡಸ್ಟ್ರೀಸ್, ಎಸ್ ಬಿಐ, ಜೆಎಸ್ ಡಬ್ಲ್ಯು ಸ್ಟೀಲ್, ಎನ್ ಟಿಪಿಸಿ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಟಾಟಾ ಮೋಟಾರ್ಸ್, ಸನ್ ಫಾರ್ಮಾ, ಮಹೀಂದ್ರ ಆ್ಯಂಡ್ ಮಹೀಂದ್ರಾ ಷೇರುಗಳು ಲಾಭಗಳಿಸಿದೆ.
ಇತ್ತೀಚೆಗಷ್ಟೇ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು 3.4 ಲಕ್ಷ ಕೋಟಿ ರೂಪಾಯಿಗಳಿಗೆ ಖರೀದಿಸಿರುವ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಶುಕ್ರವಾರ, ಟ್ವಿಟರ್ ಖರೀದಿ ಒಪ್ಪಂದ ತಾತ್ಕಾಲಿಕ ಸ್ಥಗಿತಗೊಂಡಿರುವುದಾಗಿ ಮಸ್ಕ್ ಟ್ವೀಟ್ ಮಾಡಿರುವುದಾಗಿ ವರದಿಯಾಗಿದೆ. ಇದರ ಪರಿಣಾಮ ಟ್ವಿಟರ್ ಷೇರುಗಳು ಶೇ.22ರಷ್ಟು ಕುಸಿತ ಕಂಡಿದೆ.