Advertisement

ನಿದ್ರಾದೇವಿಯ ಆಟ ಮರೆಯಲಾಗದ ಪಾಠ

01:07 PM May 29, 2018 | Team Udayavani |

ಅವತ್ತು ರಾತ್ರಿ ಗಂಟೆಗೊಮ್ಮೆ ಎಚ್ಚರವಾಗುತ್ತಿತ್ತು. ಪ್ರತಿಬಾರಿಯೂ ಬೆಳಗ್ಗೆ ಐದೂವರೆಗೆ ಏಳಬೇಕು ಎಂದುಕೊಂಡೇ ಮಲಗುತ್ತಿದ್ದೆ. ಕಡೆಗೊಮ್ಮೆ ಎಚ್ಚರವಾದಾಗ ಎಂಟೂವರೆ ಆಗಿಹೋಗಿತ್ತು. ಸಮಯ ಎಷ್ಟೆಂದು ತಿಳಿಯುತ್ತಿದ್ದಂತೆಯೇ ಕುಸಿದು ಬೀಳುವಂತಾಯ್ತು… 

Advertisement

ಕರ್ನಾಟಕ ಕಾಲೇಜಿನಲ್ಲಿ ನಾನು ಬಿ.ಎ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿದ್ದ ಸಮಯ. ದ್ವಿತೀಯ ಪಿಯು ಆಧಾರದ ಮೇಲೆ ಪೊಲೀಸ್‌ ಇಲಾಖೆ ಸಿವಿಲ್‌ ಕಾನ್ಸ್‌ಟೆಬಲ್‌ ಹು¨ªೆಗೆ ಅರ್ಜಿ ಆಹ್ವಾನಿಸಿದ್ದರು. ಆಗ ಆ ಹುದ್ದೆಗೆ ನಾನೂ ಅರ್ಜಿ ಹಾಕಿ¨ªೆ. ಜಾಗತಿಕ  ಮಾಹಿತಿಯುಳ್ಳ ಹಲವು ಪುಸ್ತಕಗಳ ಮೊರೆ ಹೋಗಿ ಪರೀಕ್ಷೆಗೆ ಸಕಲ ಸಿದ್ಧತೆ ಕೂಡಾ ನಡೆಸಿ¨ªೆ.

2-3 ತಿಂಗಳ ನಂತರ ಪರೀಕ್ಷೆ ಬರೆಯಲು ಪೊಲೀಸ್‌ ಇಲಾಖೆಯಿಂದ ಪ್ರಕಟಣೆ ಬಂತು. ನನ್ನ ಪರೀûಾ ಕೇಂದ್ರ ಧಾರವಾಡದ ಸೆಂಟ್‌ ಜೋಸೆಫ್ ಕಾಲೇಜಿನಲ್ಲಿತ್ತು. ಪರೀಕ್ಷೆ ರವಿವಾರ 9 ಗಂಟೆಗೆ ನಿಗದಿಯಾಗಿತ್ತು. ನಾನು 24 ಕಿ.ಮೀ ದೂರವಿರುವ ಹಳ್ಳಿಯಿಂದ ಬಂದು ಪರೀಕ್ಷೆ ಬರೆಯಬೇಕಾಗಿತ್ತು. ನಾನು ನಮ್ಮೂರಿನಿಂದ ಧಾರವಾಡಕ್ಕೆ ಹೋಗಿ 9 ಗಂಟೆಗೆ ಪರೀಕ್ಷೆ ಬರೆಯಬೇಕು ಎಂದರೆ 8 ಗಂಟೆಗೆಲ್ಲಾ ಧಾರವಾಡದಲ್ಲಿರಬೇಕಿತ್ತು. ಅಂದರೆ ಬೆಳಗ್ಗೆ 6.30ಕ್ಕೆ ನಮ್ಮೂರಿನಿಂದ ಹೊರಡುವ ಬಸ್ಸು ಹಿಡಿದು ಹೋಗಬೇಕು. ನಾಳೆ ಯಾವುದಾದರೂ ಪ್ರಮುಖ ಕೆಲಸ ಮಾಡಬೇಕಿದ್ದರೆ ಅದರ ಹಿಂದಿನ ರಾತ್ರಿ ನನಗೆ ಸರಿಯಾಗಿ ನಿದ್ರೆಯೇ ಬರುತ್ತಿರಲಿಲ್ಲ. ನಾಳೆ ಕೆಲಸ ಹೇಗಾಗುತ್ತದೋ, ಸರಿಯಾದ ಸಮಯಕ್ಕೆ ತಲುಪುತ್ತೇನೋ ಇಲ್ಲವೋ ಎಂದು ಭಯದಲ್ಲಿಯೇ ನಿದ್ದೆಗೆಡುತ್ತಿದ್ದೆ. ನಿದ್ದೆ ಬಂದರೂ ಆಗಾಗ ಎಚ್ಚರವಾಗಿ ಒತ್ತಡಕ್ಕೊಳಗಾಗುತ್ತಿದ್ದೆ.

ಅವತ್ತೂ ಹಾಗೇ ಆಯ್ತು. ಶನಿವಾರ ರಾತ್ರಿ 10 ಗಂಟೆಗೆಲ್ಲಾ ಮಲಗಿಬಿಟ್ಟೆ. ಬೇಗನೆ ನಿದ್ರೆಗೆ ಜಾರಿದೆ. ನಂತರ ಸ್ವಲ್ಪ ಸಮಯಕ್ಕೆ ಎಚ್ಚರವಾಯ್ತು. ಮೊಬೈಲ್‌ ತೆಗೆದು ಸಮಯ ನೋಡಿದರೆ 12.45 ಆಗಿತ್ತು. ಇನ್ನೂ ಬೆಳಕಾಗಿಲ್ಲವೆಂದು ಮತ್ತೆ ಮಲಗಿದೆ. ಕೆಲ ಸಮಯದ ನಂತರ ಮತ್ತೆ ಎಚ್ಚರವಾಯ್ತು. ಆಗ ಸಮಯ ನೋಡಿದರೆ 1.55 ಆಗಿತ್ತು. ಇನ್ನೂ ಬಹಳ ಸಮಯವಿದೆ ಎಂದು ಮತ್ತೆ ಮಲಗಿದೆ. ಎಲ್ಲಿ ಬೆಳಗಿನ ಬಸ್ಸು ತಪ್ಪಿಸಿಕೊಳ್ಳುತ್ತೇನೋ ಎಂಬ ಭಯದಲ್ಲಿ ಪುನಃ ಪುನಃ ಸಮಯ ನೋಡುತ್ತಿದ್ದೆ. ಮತ್ತೂಮ್ಮೆ ಎಚ್ಚರವಾದಾಗ ಸಮಯ 3.30 ಆಗಿತ್ತು. ಇನ್ನೂ ಸಮಯವಿದೆ ಎಂದು  ಮತ್ತೆ ಮಲಗಿದೆ. ಮತ್ತೆ 4.30ಕ್ಕೆ ಎಚ್ಚರವಾಯ್ತು. ಎದ್ದುಬಿಡು ಎಂದು ಮನಸ್ಸು ಹೇಳಿತು. ಆದರೆ, ದೇಹ ಏಳಲು ಒಪ್ಪಲೇ ಇಲ್ಲ. ಇನ್ನೂ ಒಂದು ಗಂಟೆ ಸಮಯವಿದೆಯಲ್ಲ ಎಂದು ಕಣ್ಣು ಮುಚ್ಚಿದೆ. ರಾತ್ರಿಯೆಲ್ಲಾ ಆಟವಾಡಿಸಿದ ನಿದ್ರಾದೇವಿ ಬೆಳಗಿನ ಜಾವದಲ್ಲಿ ನನ್ನನ್ನು ತನ್ನ ವಶಕ್ಕೆ ಪಡೆದುಕೊಂಡಳು. 5.30ಕ್ಕೆ ಎಚ್ಚರವಾಗಬೇಕಿದ್ದ ನನಗೆ ಮತ್ತೂಮ್ಮೆ ಎಚ್ಚರವಾದಾಗ ಕಿಟಿಕಿಯಿಂದ ಸೂರ್ಯನ ಕಿರಣಗಳು ಕಣ್ಣಿಗೆ ಚುಚ್ಚಿದಾಗಲೇ. ಆಗ ಸಮಯ 8.30! 

“ಹಾಂ!’ ಎಂದು ಗಾಬರಿಗೊಂಡೆ. ಇನ್ನರ್ಧ ಗಂಟೆಯಲ್ಲಿ ಧಾರವಾಡಕ್ಕೆ ಹೋಗಲು ಸಾಧ್ಯವೇ ಎಂದು ಯೋಚಿಸಿದೆ. ಭಯದಲ್ಲಿ ಮೈ ಬೆವರತೊಡಗಿತ್ತು. ದಿಕ್ಕು ತೋಚದೆ ಕಣ್ಣೀರಾದೆ. ಮೇಜಿನ ಮೇಲೆ ಇದ್ದ ಪುಸ್ತಕಗಳು ನನ್ನನ್ನು ಮರುಕದಿಂದ ನೋಡಿದಂತೆ ಅನಿಸಿತು. ಸತತ ಆರು ತಿಂಗಳ ಅಭ್ಯಾಸವನ್ನು ಒಂದು ರಾತ್ರಿಯಲ್ಲಿ ಹಾಳುಗೆಡವಿಕೊಂಡಿದ್ದೆ. ಇದು ನನ್ನಿಂದಲೇ ಆದ ತಪ್ಪು. ಬೆಳಗ್ಗೆ 5.30ಗೆ ಅಲಾರಾಂ ಇಟ್ಟುಕೊಂಡು, ಯಾವ ಭಯವಿಲ್ಲದೆ ಸುಖವಾಗಿ ಮಲಗಿದ್ದರೆ ನನಗೆ ಈ ಗತಿ ಬರುತ್ತಿರಲಿಲ್ಲ ಎಂಬುದನ್ನು ಮನಸ್ಸು ಒಪ್ಪಿಕೊಂಡಿತು. ಮಾಡಿದ್ದುಣ್ಣೋ ಮಾರಾಯ ಎಂದು ಸುಮ್ಮನಾದೆ. ವ್ಯರ್ಥ ಒತ್ತಡದಿಂದ ಒಂದೊಳ್ಳೆಯ ಅವಕಾಶವನ್ನು ಕಳೆದುಕೊಂಡಿದ್ದೆ. ಮುಂದಿನ ಆಗು ಹೋಗುಗಳ ಬಗ್ಗೆ ಭಯಪಟ್ಟು ನಿದ್ದೆಗೆಟ್ಟರೆ ಯಶಸ್ಸು ಸಿಗುವುದಿಲ್ಲ ಎಂದು ಅರ್ಥವಾಗಿತ್ತು. 

Advertisement

– ಪ್ರವೀಣ ಜ. ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next