ಮುಂಬೈ: ಐಸಿಸಿ ಪ್ರತಿ ತಿಂಗಳು ನೀಡುವ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಪುರುಷರ ವಿಭಾಗದಲ್ಲಿ ಈ ಬಾರಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ. ವನಿತಾ ವಿಭಾಗದಲ್ಲಿ ಪಾಕಿಸ್ಥಾನದ ನಿದಾ ದಾರ್ ಅವರು ಆಯ್ಕೆಯಾಗಿದ್ದಾರೆ.
ಪುರುಷರ ವಿಭಾಗದಲ್ಲಿ ಕೊಹ್ಲಿ ಜೊತೆಗೆ ಜಿಂಬಾಬ್ವೆಯ ಸಿಕಂದರ್ ರಜಾ ಮತ್ತು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು, ಆದರೆ ಭಾರತೀಯ ಬ್ಯಾಟರ್ ಅವರನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದರು.
ಅಕ್ಟೋಬರ್ ತಿಂಗಳಲ್ಲಿ ವಿರಾಟ್ ಕೊಹ್ಲಿ ಅವರು ಕೇವಲ ನಾಲ್ಕು ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ ಪಾಕಿಸ್ಥಾನ ವಿರುದ್ಧದ ಅಜೇಯ 82 ಸೇರಿದಂತೆ ಮಹತ್ವಪೂರ್ಣ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ.
ಇದನ್ನೂ ಓದಿ:ನೆಟ್ಟಿಗರ ಮನಗೆದ್ದ ‘ಚಹಾ ಐಸ್ ಕ್ರೀಮ್’: ವೈರಲ್ ವಿಡಿಯೋ
Related Articles
ವನಿತಾ ವಿಭಾಗದಲ್ಲಿ ನಿದಾ ದಾರ್ ಜೊತೆಗೆ ಭಾರತದ ಜೆಮಿಮಾ ರೋಡ್ರಿಗಸ್ ಮತ್ತು ದೀಪ್ತಿ ಶರ್ಮಾ ಕೂಡ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಆದರೆ ಪಾಕಿಸ್ತಾನದ ಅನುಭವಿ ಆಲ್‌ರೌಂಡರ್ ಭಾರತದ ಜೋಡಿಯನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಅಕ್ಟೋಬರ್ ತಿಂಗಳಲ್ಲಿ ನಡೆದ ವನಿತಾ ಏಷ್ಯಾಕಪ್ ನಲ್ಲಿ ನಿದಾ ದಾರ್ ಅವರು ಆರು ಇನ್ನಿಂಗ್ಸ್ ಗಳಲ್ಲಿ 145 ರನ್ ಗಳಿಸಿದ್ದಲ್ಲದೆ, ಎಂಟು ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ.