Advertisement
ಜೆಲ್ಲಿ, ಪೆಟ್ರೋಲ್, ಔಷಧಿ, ಕಡ್ಡಿ, ಬಾಂಬ್, ಸೀಮೆಎಣ್ಣೆ, ಕೆರೋಸಿನ್, ಬ್ಯಾಟರಿ, ತಲೆಮಾಂಸ, ಚಿಕನ್ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಇದ್ಯಾವುದೋ ಮಿಲ್ಟ್ರಿ ಹೋಟೆಲ್‌ನಲ್ಲಿ ಸಿಗುವ ಮೆನು ಅಲ್ಲ. ಬದಲಿಗೆ ರೌಡಿಗಳೇ ಇಟ್ಟುಕೊಂಡಿರುವ ನಿಕ್ ನೇಮ್(ಅಡ್ಡ ಹೆಸರು)ಗಳು.
Related Articles
Advertisement
ಹೇಗೆ ಅಡ್ಡ ಹೆಸರು ಕೊಡುತ್ತಾರೆ?: ಸಾಮಾನ್ಯವಾಗಿ ರೌಡಿಯ ವರ್ತನೆ, ದೇಹದ ಆವಭಾವ,ಆತನ ಕೃತ್ಯದ ಕೌರ್ಯತೆ, ಕೆಲಸ ಈ ಎಲ್ಲ ವಿಚಾರಗಳನ್ನು ಆಧರಿಸಿ ಆತನ ಸಹಚರರೇ ಅಡ್ಡ ಹೆಸರುಗಳನ್ನು ಇಡುತ್ತಾರೆ. ಇನ್ನು ಕೆಲವಕ್ಕೆ ಕಾರಣಗಳೇ ಇಲ್ಲ. ಅಂಥ ಕೆಲ ಹೆಸರುಗಳು ಇಟ್ಟುಕೊಳ್ಳುತ್ತಾರೆ. ಇನ್ನು ಕೆಲ ಸಂದರ್ಭದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ಅನೀರಿಕ್ಷಿತವಾಗಿ ಕರೆಯುವ ಹೆಸರನ್ನೇ ತಮ್ಮ ನಿಕ್‌ನೇಮ್‌ಗಳಾಗಿ ಇಟ್ಟುಕೊಳ್ಳುವ ವಾಡಿಕೆ ಭೂಗತಲೋಕದಲ್ಲಿ ಸಾಮಾನ್ಯ. ಈ ನೇಮ್‌ಗಳು ಕೇಳುಗನಿಗೆ ಅಚ್ಚರಿ ಉಂಟುಮಾಡಿದರೂ ರೌಡಿಯ ಎದೆ ಉಬ್ಬಿಸುತ್ತದೆ. ಅದು ದೇವರು, ಪ್ರಾಣಿ, ಪಕ್ಷಿ, ದಿನಬಳಕೆ ವಸ್ತುಗಳು, ಉದ್ಯೋಗ ಹೀಗೆ ನಾನಾ ರೀತಿಯ ನಿಕ್‌ನೇಮ್ ಗಳು ರೌಡಿ ಹೆಸರಿನ ಮುಂದೆ ಕಾಣಿಸಿಕೊಳ್ಳುತ್ತವೆ. ಆ ಹೆಸರಿನಿಂದ ಕೂಗಿದರೆ ರೌಡಿ ಎದೆ ಉಬ್ಬಿಸುತ್ತಾನೆ ಎನ್ನುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್.
ರಾಮಾಯಣದ ಪಾತ್ರಗಳು
ಯಲಹಂಕದ ಮೂವರು ರೌಡಿಗಳು ರಾಮಾಯಣದ ಪಾತ್ರಗಳನ್ನು ನೆನಪಿಸುತ್ತದೆ. ಮೂರು ವರ್ಷಗಳ ಹಿಂದೆ ನಡೆದ ಪ್ರಕರಣವೊಂದರಲ್ಲಿ ರಾಮ, ಲಕ್ಷ್ಮಣ, ಹನುಮಂತ ಎಂಬವರನ್ನು ಬಂಧಿಸಲಾಗಿತ್ತು. ಆಗ ವಿಚಾರಣೆ ಸಂದರ್ಭದಲ್ಲಿ ಈ ತಂಡಕ್ಕೆ ರಾಮನೇ ಮುಖ್ಯಸ್ಥ. ರಾಮ, ಲಕ್ಷ್ಮಣ ಹೇಳಿದ ಕೆಲಸವನ್ನು ಹನುಮಂತ ಚಾಚು ತಪ್ಪದೇ ಮಾಡುತ್ತಾನೆ. ಅದು ಕೊಲೆ, ದರೋಡೆ, ಸುಲಿಗೆ ಸೇರಿ ಯಾವುದೇ ಕೃತ್ಯವಿರಲಿ ಯಶಸ್ವಿಯಾಗಿ ಹನುಮಂತ ನಿರ್ವಹಿಸುತ್ತಾನೆ. ಈ ಮೂವರ ವಿರುದ್ಧ ಸಾಕಷ್ಟು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಆ ಪ್ರಕರಣ ನಿರ್ವಹಿಸಿದ ಪೊಲೀಸ್ ಅಧಿಕಾರಿಯೊಬ್ಬರು ನೆನಪು ಮಾಡಿಕೊಳ್ಳುತ್ತಾರೆ.
ಯಾವೆಲ್ಲಾ ಅಡ್ಡ ಹೆಸರುಗಳು ಬಳಕೆ?
ಕೆಲವೊಂದು ಪ್ರಾಣಿ,ಪಕ್ಷಿ, ದಿನಬಳಕೆ ವಸ್ತುಗಳು ಹೆಸರುಗಳಿದ್ದರೆ, ಇನ್ನು ಕೆಲವಕ್ಕೆ ಯಾವುದೇ ಅರ್ಥ ಇರವುದಿಲ್ಲ. ಕೊತ್ವಾಲ್ ರಾಮಚಂದ್ರ, ಡೆಡ್ಲಿ ಸೋಮ, ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ಕೊರಂಗು ಕೃಷ್ಣ, ಕೋತಿಮಂಜ, ಕವಳ ವಿಜಯಕುಮಾರ್, ಕುಟ್ಟಿ ತಿರುಕುಮಾರನ್, ಗೇಟ್ ಗಣೇಶ, ಸ್ಪಾಟ್ ನಾಗ, ಕಡ್ಡಿಪುಡಿ ಆನಂದ್, ಬಾಂಬ್ ನಾಗ, ಸೈಲೆಂಟ್ ಸುನೀಲ್, ಹಫ್ತಾ ಅಜ್ಮಲ್, ಹೆಬ್ಬೆಟ್ಟು ಮಂಜ, ಆಯಿಲ್ ಕುಮಾರ, ಜಿಂಕೆ ರವಿ, ರೆಕ್ಕೆ ರಮೇಶ್, ಬ್ಯಾಟರಿ, ಮುಲಾಮ್ ಲೋಕಿ, ಔಷಧಿ ಗಿರೀಶ್, ಸೈಟ್ ಗೋಪಿ, ವಿಸ್ಕಿ ಸೀನ, ಕೆರೋಸಿನ್ ರಾಮಪ್ಪ, ಇಸ್ತ್ರೀಗಾಡಿ ವೆಂಕ, ಜೆಲ್ಲಿ ವೆಂಕಟೇಶ್, ಟಿಂಕರ್ ಇಸ್ಮಾಯಿಲ್, ಪಾಯ್ಸನ್ ರಾಮ, ಆ್ಯಸಿಡ್ ರಾಜ, ಸೈಕಲ್ ರವಿ, ಒಂಟೆ ರೋಹಿತ್, ಬೇಕರಿ ರಘು, ಕೇಬಲ್ ಶ್ರೀಧರ ಹೀಗೆ ನಗರದಲ್ಲಿರುವ ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿಗೂ ಅಡ್ಡ ಹೆಸರುಗಳಿವೆ.
ರೌಡಿಗಳ ಪರೇಡ್‌ನಲ್ಲಿ ಅಡ್ಡ ಹೆಸರುಗಳದ್ದೇ ಹವಾ!
ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅಥವಾ ಶುಭ ಕಾರ್ಯಗಳು ಹಾಗೂ ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ರೌಡಿಗಳ ಪರೇಡ್ ನಡೆಸಲಾಗುತ್ತದೆ. ಇನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಆಗಾಗ್ಗೆ ಪರೇಡ್ ನಡೆಸುತ್ತಾರೆ. ಈ ವೇಳೆ ಅವರ ಹೆಸರು ಕೂಗುವುದನ್ನು ಕೇಳಿಸಿಕೊಂಡರೆ ಒಂದು ರೀತಿಯ ಕೂತುಹಲ ಜತೆಗೆ ಏನೋ ಒಂದು ರೀತಿ ಖುಷಿ. ರೌಡಿಗಳ ಪರೇಡ್ ಸಂದರ್ಭದಲ್ಲಿ ಕರೆದಾಗ ಆತ ತಲೆ ತಗ್ಗಿಸುತ್ತಾನೆ. ಆದರೆ, ಜನರು, ಆತನ ಸಹಚರರು ಕೂಗಿದಾಗ ಹಿಗ್ಗುತ್ತಾರೆ. ಕೆಲವೊಮ್ಮೆ ಅವರ ಹೆಸರು ಕೂಗಿದಾಗ ಅದರ ಅರ್ಥವೇ ನಮಗೆ ಗೊತ್ತಾಗುವುದಿಲ್ಲ. ಆಗ ಆತನಿಗೆ ಕೇಳಿ ತಿಳಿದುಕೊಳ್ಳುತ್ತೇವೆ. ಆಗ ಅವರು, ನಮ್ಮ ಸ್ನೇಹಿತರು, ಜನ ಕೊಟ್ಟಿರುವ “ಬಿರುದು’ ನಾವೇನೂ ಮಾಡೋದು ಸಾರ್ ಎಂದು ತಲೆ ತಗ್ಗಿಸುತ್ತಾರೆ. ಕೆಲ ಹೆಸರುಗಳು ದಿನಬಳಕೆ ವಸ್ತುಗಳಂತೆ ರೂಢಿಗತವಾಗಿದೆ. ಇನ್ನು ಹಳೇ ರೌಡಿಗಳ ಹೆಸರು ಕೂಗಿದಾಗ ಅವರು ನಮ್ಮನ್ನೇ ಗುರಿಯಾಸಿದ ಪ್ರಸಂಗಗಳು ನಡೆದಿವೆ. ಅದನ್ನು ಗಮನಿಸಿದ ಹಿರಿಯ ಅಧಿಕಾರಿಗಳು, ಆತನಿಗೆ ಕಪಾಳಮೋಕ್ಷ ಮಾಡಿ ಎಚ್ಚರಿಕೆ ನೀಡಿದ ಘಟನೆಗಳು ನಡೆದಿವೆ ಎಂದು ಪರೇಡ್‌ನಲ್ಲಿ ರೌಡಿಗಳ ಹೆಸರು ಕೂಗುವ ಸಿಬ್ಬಂದಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.
– ಮೋಹನ್ ಭದ್ರಾವತಿ