Advertisement

ನೈಸ್‌ ಅಕ್ರಮಗಳ ವರದಿ ಅನುಷ್ಠಾನಕ್ಕೆ ಕನ್ನಡವೇ ಕಂಟಕ!

12:32 PM Apr 18, 2017 | Team Udayavani |

ಬೆಂಗಳೂರು: ಬೆಂಗಳೂರು ಮೈಸೂರು ಹೆದ್ದಾರಿ ಎಕ್ಸ್‌ಪ್ರೆಸ್‌ ಕಾರಿಡಾರ್‌ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಪತ್ತೆ ಹಚ್ಚಿರುವ ವಿಧಾನ ಮಂಡಲದ ಜಂಟಿ ಸದನ ಸಮಿತಿಯ ವರದಿ ಅನುಷ್ಠಾನಕ್ಕೆ ಈಗ ‘ಭಾಷೆ’ ಅಡ್ಡಿಯಾಗಿದೆ. ನೈಸ್‌ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಅಗತ್ಯಕ್ಕಿಂತ ಹೆಚ್ಚೇ ನೀಡಲಾಗಿದೆ.

Advertisement

ಯೋಜನೆ ಪೂರ್ಣಗೊಳ್ಳುವ ತನಕ ಟೋಲ್‌ ಸಂಗ್ರಹ ಮಾಡುವಂತಿಲ್ಲ ಎಂಬ ನಿಯಮವಿರುವ ಕಾರಣ, ಇದುವರೆಗೆ ಸಂಗ್ರಹಿಸಿರುವ ಟೋಲ್‌ ಶುಲ್ಕವನ್ನು ಸರ್ಕಾರಕ್ಕೆ ವಾಪಸ್‌ ನೀಡಬೇಕು ಹಾಗೂ ನೈಸ್‌ ರಸ್ತೆಗೆ ಡಾಂಬರ್‌ ಬದಲು ಸಿಮೆಂಟ್‌ ರಸ್ತೆ ನಿರ್ಮಾಣ ಮಾಡಬೇಕು ಎನ್ನುವ ಮಹತ್ವದ ಶಿಫಾರಸ್ಸುಗಳನ್ನು ಹೊಂದಿದ ಸದನ ಸಮಿತಿ ವರದಿ ಜಾರಿಗೆ ಅನಗತ್ಯ ಕಾರಣಗಳನ್ನು ಮುಂದೊಡ್ಡಿ ವಿಳಂಬ ಮಾಡಲಾಗುತ್ತಿದೆ.

ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ಕಳೆದ ನವೆಂಬರ್‌ನಲ್ಲಿಯೇ ವರದಿ ಮಂಡಿಸಿದ್ದರೂ, ನೈಸ್‌ ಕಂಪನಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟು ಮಾಡುವ ಹಾಗೂ ಸರ್ಕಾರದ ಆಸ್ತಿಯನ್ನು ರಕ್ಷಿಸುವ ಸದನ ಸಮಿತಿ ವರದಿ ಅನುಷ್ಠಾನಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. 

ವಿಧಾನ ಮಂಡಲದ ಹಿರಿಯ, ಕಿರಿಯ ಸದಸ್ಯರು, ಪಕ್ಷದ ಮುಖಂಡರು, ಸದನ ಸಮಿತಿ ವರದಿ ಜಾರಿಗೆ ಎಷ್ಟೇ ಒತ್ತಡ ಹಾಕಿದರೂ ಅಧಿವೇಶನದಲ್ಲಿ ಪ್ರಸ್ತಾಪಿಸಿದರೂ, ಒಂದಿಲ್ಲೊಂದು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ವರದಿ ಜಾರಿಯಾಗದಂತೆ ನೋಡಿಕೊಳ್ಳುವ ಪ್ರಯತ್ನ ತೆರೆ ಮರೆಯಲ್ಲಿ ನಡೆಯುತ್ತಿದೆ. 

ವಿಧಾನಸಭಾಧ್ಯಕ್ಷ ಕೋಳಿವಾಡ್‌ ಅವರು ನೈಸ್‌ ಅಕ್ರಮಗಳ ಕುರಿತ ಜಂಟಿ ಸದನ ಸಮಿತಿಯ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸುವ ಸಂಬಂದ ವರದಿ ಪ್ರತಿಯನ್ನು ಮುಖ್ಯ ಕಾರ್ಯದರ್ಶಿ ಸುಭಾಸ್‌ಚಂದ್ರ ಕುಂಟಿಯಾ ಅವರಿಗೆ ಕಳುಹಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ವರದಿಯ ಒಂದು ಪ್ರತಿಯನ್ನು ನೈಸ್‌ ಮುಖ್ಯಸ್ಥ ಅಶೋಕ್‌ ಖೇಣಿ ಅವರಿಗೆ ಕಳುಹಿಸಿದ್ದಾರೆ.

Advertisement

ಕನ್ನಡ ಭಾಷೆಯಲ್ಲಿರುವ ಸದನ ಸಮಿತಿಯ ವರದಿಯನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ತಮಗೆ ನೀಡುವಂತೆ ಅಶೋಕ್‌ ಖೇಣಿ ಮುಖ್ಯ ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದ್ದಾರೆ. ಖೇಣಿಯವರ ಮನವಿ ಪ್ರಕಾರ ಸದನ ಸಮಿತಿಯ ವರದಿಯನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳು ವಿಧಾನಸಭಾಧ್ಯಕ್ಷ ಕೋಳಿವಾಡ ಅವರಿಗೆ ವರದಿಯನ್ನು ವಾಪಸ್‌ ಕಳುಹಿಸಿದ್ದಾರೆ. 

3 ಸಾವಿರ ಪುಟಗಳ ವರದಿ: ಭಾಷಾ ತರ್ಜುಮೆಯ ಹೆಸರಿನಲ್ಲಿ ಸದನ ಸಮಿತಿ ವರದಿ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಲಕ್ಷಣಗಳು ಕಾಣಿಸುತ್ತಿವೆ. ವರದಿಯುವ ಸುಮಾರು 3 ಸಾವಿರ ಪುಟಗಳನ್ನು ಹೊಂದಿದ್ದು, ಇದನ್ನು ಲಭ್ಯವಿರುವ ಸಿಬ್ಬಂದಿಯನ್ನು ಬಳಸಿಕೊಂಡು ಭಾಷಾಂತರ ಮಾಡಲು ಕನಿಷ್ಠ ಎಂದರೂ ಆರು ತಿಂಗಳ ಸಮಯವಕಾಶವಾದರೂ ಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಭಾಷಾಂತರಕ್ಕೆ ಒಪ್ಪಿಸಿ ಹದಿನೈದು ದಿನಗಳಾದರೂ ಇನ್ನೂ ಸಹ ಭಾಷಾಂತರ ಕಾರ್ಯ ಆರಂಭವಾಗದಿರುವುದನ್ನು ಗಮನಿಸಿದರೆ.

ಈ ಸರ್ಕಾರದ ಅವಧಿ ಮುಗಿದರೂ ಭಾಷಾಂತರ ಕಾರ್ಯ ಪೂರ್ಣಗೊಳ್ಳದೇ ಇರುವ ಸ್ಥಿತಿ ಇದೆ. ವಿಧಾನಸಭೆಯ ಅವಧಿ ಪೂರ್ಣಗೊಳ್ಳುವುದರೊಳಗೆ ಸದನ ಸಮಿತಿ ವರದಿ ಅನುಷ್ಠಾನ ಆದರೆ, ಅದು ಜಾರಿಯಾದಂತೆ, ಇಲ್ಲವಾದಲ್ಲಿ., ವಿಧಾನಸಭೆ ಅವಧಿ ಮುಕ್ತಾಯಗೊಂಡ ನಂತರ ಸದನ ಸಮಿತಿ ವರದಿಯನ್ನು ಜಾರಿಗೆ ತರುವುದು ಕಷ್ಟವಾಗಿದ್ದು, ಅದು ಮಹತ್ವವನ್ನು ಕಳೆದುಕೊಳ್ಳುತ್ತದೆ. ನೈಸ್‌ ಸಂಸ್ಥೆ ಸಂಕಷ್ಟದಿಂದ ಪಾರಾಗಲು ಭಾಷಾ ತರ್ಜುಮೆ ದಾರಿ ಮಾಡಿಕ್ಕೊಟ್ಟಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next