ಬೆಂಗಳೂರು: ದರೋಡೆ ಕೃತ್ಯಗಳ ಮೂಲಕ ಉಗ್ರ ಸಂಘಟನೆಗಳಿಗೆ ಹಣ ಸಂದಾಯ ಹಾಗೂ ಭಯೋತ್ಪಾದನಾ ಚಟುವಟಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಸಂಘಟನೆಯ ಮೂವರು ಉಗ್ರರಿಗೆ ಎನ್ಐಎ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಹಾಗೂ ಸಾವಿರಾರು ರೂ. ದಂಡ ವಿಧಿಸಿ ಸೋಮವಾರ ಆದೇಶ ನೀಡಿದೆ.
ಪಶ್ಚಿಮ ಬಂಗಾಳ ಮೂಲದ ಹಬೀಬುರ್ ರೆಹಮಾನ್ (28), ನಾಜಿರ್ ಶೇಖ್ ಅಲಿ ಯಾಸ್ ಪಾಟ್ಲಾ ಅನಾಸ್(25) ಮತ್ತು ಮೊಶ್ರಫ್ ಹುಸೇನ್ (22) ಎಂಬುವರಿಗೆ ಶಿಕ್ಷೆಹಾಗೂ 48 ಸಾವಿರ ರೂ. ದಂಡ ವಿಧಿಸಲಾಗಿದೆ. 2014ರಲ್ಲಿ ಬಾರ್ದ್ವಾನ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಜೆಎಂಬಿ ಉಗ್ರರಾದ ಹಬೀಬುರ್ ರೆಹಮಾನ್ ಹಾಗೂ ಇತರೆ ಆರೋಪಿಗಳು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದರು. ಚಿಕ್ಕಬಾಣವಾರ, ದೊಡ್ಡಬಳ್ಳಾಪುರ, ರಾಮನಗರದ ವ್ಯಾಪ್ತಿಯಲ್ಲಿ ಆಶ್ರಯ ಪಡೆದುಕೊಂಡಿದ್ದರು.
ಅಲ್ಲದೇ ಅಲ್ಲಿಂದಲೇ ಜೆಎಂಬಿ ಸಂಘಟನೆ ಬಲಗೊಲಿಸಲು ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದರು. ಈ ಶಂಕಿತರಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದ ಪಶ್ಚಿಮ ಬಂಗಾಳದ ಎನ್ಐಎ ಅಧಿಕಾರಿಗಳು 2019ರಲ್ಲಿ ಹಬೀಬುರ್ ರೆಹಮಾನ್ನನ್ನು ಬಂಧಿಸಿದ್ದರು. ಆಗ ಸಂಘಟನೆಗಾಗಿ ದರೋಡೆಯಂತಹ ಕೃತ್ಯಗಳಲ್ಲಿ ತೊಡಗಿರುವುದು ಪತ್ತೆಯಾಗಿತ್ತು.
ಈ ಪ್ರಕರಣದ ತನಿಖೆ ನಡೆಸಿದ್ದ ಎನ್ಐಎ ಅಧಿಕಾರಿಗಳು ಯು ಎಪಿಎ ಕಾಯ್ದೆ ಹಾಗೂ ಡಕಾಯಿತಿ ಕೃತ್ಯಗಳ ಆರೋಪದಲ್ಲಿ ಕೇಸ್ ದಾಖಲಿಸಿಕೊಂಡು, ಆರೋಪಪಟ್ಟಿ ಕೂಡ ಸಲ್ಲಿಸಿದ್ದರು. ಪ್ರಕರಣದಲ್ಲಿಎನ್ಐಎ ಪರ ವಿಶೇಷ ಅಭಿಯೋಜಕರಾಗಿ ವಕೀಲರಾದ ಪಿ. ಪ್ರಸನ್ನಕುಮಾರ್ ವಾದಿಸಿದ್ದರು.