ನವದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಬುಧವಾರ (ಫೆ.15) ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಸುಮಾರು 60ಕ್ಕೂ ಅಧಿಕ ಸ್ಥಳಗಳಲ್ಲಿ ಶಂಕಿತ ಐಸಿಸ್ ಬೆಂಬಲಿಗರ ವಿರುದ್ಧ ಶೋಧ ಕಾರ್ಯ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಇಂಥ ಕೆಟ್ಟ ರಾಜಕೀಯವನ್ನು ನಾನೆಂದೂ ನೋಡಿರಲಿಲ್ಲ: ಬಿಜೆಪಿ ವಿರುದ್ಧ ಸಿದ್ದು ಆಕ್ರೋಶ
2022ರಲ್ಲಿ ಕೊಯಂಬತ್ತೂರಿನಲ್ಲಿ ಸಂಭವಿಸಿದ್ದ ಕಾರು ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಈ ಶೋಧ ಕಾರ್ಯ ಕೈಗೊಂಡಿರುವುದಾಗಿ ವರದಿ ವಿವರಿಸಿದೆ. ಕೋಮು ಸೂಕ್ಷ್ಮ ಪ್ರದೇಶವಾದ ಉಕ್ಕಡಂ ಪ್ರದೇಶದ ಕೊಟ್ಟೈ ಈಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಶಂಕಿತ ಉಗ್ರ ಜಮೇಶಾ ಮುಬೀನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಾವನ್ನಪ್ಪಿದ್ದ ಘಟನೆ ನಡೆದಿತ್ತು.
ದೀಪಾವಳಿ ಹಬ್ಬಕ್ಕೂ ಮುನ್ನ ಈ ಸ್ಫೋಟ ನಡೆದಿದ್ದು, ಇದೊಂದು ಒಂಟಿ ತೋಳದ ದಾಳಿಯ ಸಂಚು ಎಂದು ವಿಶ್ಲೇಷಿಸಲಾಗಿತ್ತು. ಈ ಘಟನೆಗೂ ಮುನ್ನ ಕೇರಳ ಪೊಲೀಸರು ಮುಬೀನ್ ನಿಂದ 75ಕೆಜಿ ಸ್ಫೋಟಕ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು ಎಂದು ಪಿಟಿಐ ವರದಿ ಮಾಡಿದೆ.
ಇ-ಕಾಮರ್ಸ್ ಫ್ಲ್ಯಾಟ್ ಫಾರಂನಲ್ಲಿ ಸ್ಫೋಟಕ ಖರೀದಿಸಲು ನೆರವು ನೀಡಿದ್ದ ಆರು ಮಂದಿಯನ್ನು ಬಂಧಿಸಲಾಗಿತ್ತು ಎಂದು ವರದಿ ಹೇಳಿದೆ. ಆ ನಿಟ್ಟಿನಲ್ಲಿ ಎನ್ ಐಎ ಇದೀಗ ಮತ್ತೆ ಶಂಕಿತ ಐಸಿಸ್ ಬೆಂಬಲಿಗರ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.