ನವದೆಹಲಿ: ಭಯೋತ್ಪಾದಕ ,ಮಾದಕ ದ್ರವ್ಯ ಕಳ್ಳಸಾಗಣೆದಾರರು ಮತ್ತು ದರೋಡೆಕೋರರ ನಂಟು ಹೊಂದಿರುವ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸೇರಿದಂತೆ ಆರು ರಾಜ್ಯಗಳ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ಬುಧವಾರ ಏಕಕಾಲದಲ್ಲಿ ದಾಳಿ ನಡೆಸಿದೆ.
ಪಂಜಾಬ್‌ನ ಮುಡ್ಕಿ, ತಲ್ವಾಂಡಿ, ಫಿರೋಜ್‌ಪುರ ಮತ್ತು ಬಟಿಂಡಾದಲ್ಲಿಯೂ ಪರಿಶೀಲನೆ ನಡೆಸಿದ್ದು, ಮನೆಗಳ ಒಳಗೆ ಮತ್ತು ಹೊರ ಹೋಗಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಕ್ರಿಮಿನಲ್ ಕೇಸ್ ಹೊಂದಿರುವವರ ಮನೆಗಳ ಎನ್‌ಐಎ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಹರಿಯಾಣದ ಬಹದ್ದೂರ್‌ಗಢದಲ್ಲೂ ಶೋಧ ನಡೆಸುತ್ತಿದೆ. ಕಳೆದ ವರ್ಷ ಎನ್‌ಐಎ ದಾಖಲಿಸಿದ್ದ ಮೂರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗುತ್ತಿದೆ.
ಕೋಲ್ಕತ್ತಾದ ಎನ್‌ಐಎ ತಂಡಗಳು ಮಂಗಳವಾರ ಮಧ್ಯಪ್ರದೇಶದ ಖಾಂಡ್ವಾದಲ್ಲಿರುವ ಅಬ್ದುಲ್ ರಖೀಬ್ ಖುರೇಷಿ ಅವರ ಮನೆಯ ಮೇಲೂ ದಾಳಿ ನಡೆಸಿತ್ತು. ಖುರೇಷಿಯನ್ನು ಕಳೆದ ತಿಂಗಳು ಐಸಿಸ್‌ನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧಿಸಲಾಯಿತು.
ಭಯೋತ್ಪಾದಕರಿಗೆ ಹಣಕಾಸು ಸಹಾಯ ಮಾಡಿದ ಪ್ರಕರಣಗಳ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು ದಕ್ಷಿಣ ಕಾಶ್ಮೀರದ ಪುಲ್ವಾಮಾ ಮತ್ತು ಶೋಪಿಯಾನ್‌ನ ಸೇರಿದಂತೆ 13 ಸ್ಥಳಗಳಲ್ಲಿ ಸೋಮವಾರ ದಾಳಿ ನಡೆಸಿತ್ತು.